ಸ್ವಯಂ ಬಂದ್‍ಗೆ ಸಾರ್ವಜನಿಕರು ಸಹಕರಿಸಿ : ತಹಶೀಲ್ದಾರ್

ಬಾದಾಮಿ, ಮೇ21: ಸರಕಾರದ ಲಾಕ್ ಡೌನ್ ನಿಯಮಗಳೊಂದಿಗೆ ಸ್ಥಳೀಯವಾಗಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಡಿತಗೊಳಿಸುವ ಉದ್ದೇಶಕ್ಕೆ ಕಿರಾಣಿ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಲು ಒಪ್ಪಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ತಹಶೀಲ್ದಾರ್ ಸುಹಾಸ ಇಂಗಳೆ ಮನವಿ ಮಾಡಿದರು.
ಗುರುವಾರ ಇಲ್ಲಿಯ ತಾಲೂಕ ಪಂಚಾಯತ ಸಭಾ ಭವನದಲ್ಲಿ ನಡೆದ ಕಿರಾಣಿ, ಹಣ್ಣು, ತರಕಾರಿ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಅವರು ಶುಕ್ರವಾರ ಸರಕಾರದ ನಿಯಮದಂತೆ ಬೆಳಿಗ್ಗೆ 6 ರಿಂದ 10 ಮಾತ್ರ ಕಿರಾಣಿ ಲಭ್ಯವಿರುತ್ತದೆ. ಶನಿವಾರ, ರವಿವಾರ ಮತ್ತು ಸೋಮವಾರದಂದು ಸಂಪೂರ್ಣ ಬಂದ್ ಮಾಡಲು ತಾಲೂಕ ಆಡಳಿತಕ್ಕೆ ಸಹಕಾರ ನೀಡಿದ್ದು, ಅದರಂತೆ ಸ್ಥಳೀಯ ಹಣ್ಣು, ತರಕಾರಿ ಮಾರಾಟವನ್ನು ತಳ್ಳು ಗಾಡಿ ಮೂಲಕ ವಾರ್ಡ ಮತ್ತು ಓಣಿಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಹಣಕಾಸಿನ ಫೈನಾನ್ಸ್‍ಗಳನ್ನೂ ಸಹ ಬಂದ್ ಮಾಡಲು ಸೂಚಿಸಲಾಗಿದೆ ಎಂದರು.
ಸಿಪಿಐ ರಮೇಶ ಹಾನಾಪೂರ ಮಾತನಾಡಿ ಸ್ವಯಂ ಪ್ರೇರಣೆಯಿಂದ ವ್ಯಾಪಾರಸ್ಥರು ಸಹಕಾರ ನೀಡಿದ್ದು, ಸಾರ್ವಜನಿಕರು ಅಗತ್ಯ ವಸ್ತುಗಳ ಖರೀಧಿ ನೆಪದಲ್ಲಿ ಹೊರಬಂದರೆ ಪೊಲೀಸ್ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ. ಕೋವಿಡ್ ರೋಗ ಹರಡುವಿಕೆಯ ಚೈನ್ ಸ್ಥಗಿತಗೊಳಿಸುವ ಉದ್ದೇಶದಿಂದ ಸರಕಾರದ ನಿಯಮಗಳ ಜತೆಗೆ ಸ್ಥಳೀಯವಾಗಿ ವ್ಯಾಪಾರಸ್ಥರ ಮತ್ತು ಸಾರ್ವಜನಿಕರ ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಯಾವುದೆ ಅನಗತ್ಯ ಬೈಕ್, ವಾಹನ ಸವಾರರು ಬಂದಲ್ಲಿ ಸರಕಾರದ ಮುಂದಿನ ಆದೇಶದವರೆಗೂ ವಾಹನಗಳನ್ನು ಸೀಜ್ ಮಾಡಲಾಗುವುದು. ಕೇವಲ ಆರೋಗ್ಯ ಸಮಸ್ಯೆಗೆ ಮಾತ್ರ ಬಿಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜ್ಯೋತಿ ಗಿರೀಶ, ಪ್ರೊಬೆಷನರಿ ಕೆ.ಎ.ಎಸ್ ಅಧಿಕಾರಿ, ತಾಪಂ ಇಒ ಅರ್ಜುನ್ ಒಡೆಯರ, ಪಿ.ಎಸ್.ಐ. ನೇತ್ರಾವತಿ ಪಾಟೀಲ, ಕಿರಾಣಿ ವರ್ತಕರಾದ ಬಿ.ಸಿ.ಹಿರೇಹಾಳ, ಜಯಪ್ರಕಾಶ ಪಟ್ಟಣದ, ಸುನೀಲ ಬಂಗಾರಶೆಟ್ಟರ, ನಾಗರಾಜ ಕಾಚೆಟ್ಟಿ, ಕಾಜೇಸಾಬ ದೊಡಮನಿ, ಶರಣಪ್ಪ ಪಟ್ಟಣಶೆಟ್ಟಿ, ಬೋನಗೇರಿ, ಎನ್.ಎಂ.ಗೌಡರ, ಮುದಕಪ್ಪ ಮಣ್ಣೂರ ಸೇರಿದಂತೆ ಇತರರಿದ್ದರು.
“ಸರಕಾರದ ನಿಯಮಗಳಂತೆ ನಿಗದಿತ ಅವಧಿಯಲ್ಲಿ ವ್ಯಾಪಾರ ಮಾಡುತ್ತ ಬಂದಿದ್ದು, ನಗರ ಮತ್ತು ಗ್ರಾಮೀಣ ಜನರ ಹಿತ ದೃಷ್ಟಿಯಿಂದ ಎಲ್ಲ ವರ್ತಕರು ಶನಿವಾರ, ರವಿವಾರ ಮತ್ತು ಸೋಮವಾರದಂದು ಸಂಪೂರ್ಣ ಬಂದ್ ಮಾಡಲಾಗುವುದು. ಡೋರ್ ಡಿಲೆವರಿಯೂ ಬಂದ್ ಮಾಡಲಾಗುವುದು”

  • ಪಿ, ವೀರಣ್ಣ, ಅಧ್ಯಕ್ಷ, ಕಿರಾಣಿ ವರ್ತಕರ ಸಂಘ ಬಾದಾಮಿ.