ರಾಯಚೂರು,ಜೂ.೧೫-
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಜಾಥಾ ಹಮ್ಮಿಕೊಂಡಿತ್ತು.
ಜಾಗೃತಿ ಜಾಥಾಕ್ಕೆ ಎನ್‌ಎಸ್‌ಎಸ್ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿ ವಿದ್ಯಾರ್ಥಿನಿ ಸ್ವಯಂ ಸೇವಕಿಯರನ್ನುದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪುಷ್ಪ ರಕ್ತದಾನ ಶ್ರೇಷ್ಠ ದಾನವಾಗಿದೆ. ಆಪತ್ಕಾಲದಲ್ಲಿ ಜೀವರಕ್ಷಣೆಗೆ ರಕ್ತದಾನ ಏಕೈಕ ಆಸರೆಯಾಗಿರುತ್ತದೆ. ಹಾಗಾಗಿ ಸದೃಢ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನವನ್ನು ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗುವಂತೆ ಅವರಲ್ಲಿ ಅರಿವನ್ನು ಮೂಡಿಸಲು ವಿದ್ಯಾರ್ಥಿನಿ ಸ್ವಯಂ ಸೇವಕಿಯರು ಶ್ರಮಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ್ ಜಾಗೃತಿ ಜಾಥಾದ ಉದ್ದೇಶಗಳನ್ನು ಪರಿಚಯಿಸಿ, ಇದುವರೆಗೂ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿರುವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಾಗೂ ಎಲ್ಲ ರಕ್ತದಾನಿಗಳಿಗೂ ವಿಶ್ವ ರಕ್ತದಾನಿಗಳ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ರಕ್ತವನ್ನು ಕೃತಕವಾಗಿ ತಯ್ಯಾರಿಸಲಾಗದು. ಮಾನವನ ಶರೀರದಲ್ಲಿ ಮಾತ್ರ ರಕ್ತದ ನೈಸರ್ಗಿಕ ಉತ್ಪಾದನೆ ಸಾಧ್ಯ. ಹಾಗಾಗಿ ಅಗತ್ಯವಿರುವವರಿಗೆ ಸಕಾಲಿಕವಾಗಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವುದಾದರೆ ಅದೇ ಜೀವದಾನಕ್ಕೆ ಸಮಾನ. ರಕ್ತದಾನ ಮನುಷ್ಯ ಮಾಡಬಹುದಾದ ಶ್ರೇಷ್ಠ ದಾನವಾಗಿದೆ. ಈ ನಿಟ್ಟಿನಲ್ಲಿ ಆಯೋಜಿಸಲಾದ ಜಾಗೃತಿ ಜಾಥಾ ಜನಮನ ಮುಟ್ಟುವಂತಿರಲಿ ಎಂದು ಹೇಳಿದರು.
ಕಾಲೇಜಿನಿಂದ ಆರಂಭವಾದ ಜಾಗೃತಿ ಜಾಥಾ ರಕ್ತದಾನ ಮಹಾದಾನ, ರಕ್ತದಾನ ಜೀವದಾನ, ರಕ್ತದಾನ ಮಾಡಿರಿ – ಜೀವಗಳನ್ನು ಉಳಿಸಿರಿ, ಮಾಡಿರಿ ಮಾಡಿರಿ ರಕ್ತದಾನ – ನೀಡಿರಿ ನೀಡಿರಿ ಜೀವದಾನ ಎಂಬಿತ್ಯಾದಿ ಘೋಷವಾಕ್ಯಗಳನ್ನು ಉದ್ಘೋಷಿಸುತ್ತ ನಿಜಲಿಂಗಪ್ಪ ನಗರದಾದ್ಯಂತ ಸಂಚರಿಸಿ ಎಟಿಎಂ ವೃತ್ತದಲ್ಲಿ ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ಸಾರ್ವಜನಿಕರಲ್ಲಿ ಸ್ವಯಂ ಪ್ರೇರಿತ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.