ಸ್ವಯಂ ಪ್ರೇರಿತರಾಗಿ ಮಾರ್ಗಸೂಚಿ ಪಾಲಿಸಿ

ಬ್ಯಾಡಗಿ,ಮೇ 2: ದೇಶದಲ್ಲಿ ಆತಂಕ ಸೃಷ್ಟಿಸುತ್ತಿರುವ ಕೊರೊನಾ ಎರಡನೇ ಹಂತದ ವೈರಸನ್ನು ತಡೆಗಟ್ಟಲು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದ ಲಾಕ್ ಡೌನ್ ಆದೇಶವನ್ನು ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಪಾಲಿಸಬೇಕೆಂದು ಕಾರ್ಮಿಕ ಬಂಧು ಮಂಜುನಾಥ ಪೂಜಾರ ಮನವಿ ಮಾಡಿದ್ದಾರೆ.
ಪಟ್ಟಣದ ಸಂಗಮೇಶ್ವರ ನಗರ, ಬಸವೇಶ್ವರ ನಗರ ಸೇರಿದಂತೆ ವಿವಿಧೆಡೆ ಕಟ್ಟಡ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿ ಮಾತನಾಡಿದ ಅವರು, ಕೆಲಸ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೊರೊನಾವೈರಸ್ ವಿರುದ್ಧ ಹೋರಾಡಲು ಮುಂದಾಗಬೇಕಾಗಿದೆ. ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂಜಾಗ್ರತೆಯನ್ನು ವಹಿಸಬೇಕೆಂದು ತಿಳಿಸಿದರು.
ಬಿಜೆಪಿ ಯುವ ಮುಖಂಡ ಶಿವಯೋಗಿ ಗಡಾದ ಮಾತನಾಡಿ, ಕಟ್ಟಡ ಕಾರ್ಮಿಕರಲ್ಲಿ
ಕೊರೋನಾ ವೈರಸ್ ಸೋಂಕಿನ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ತಪ್ಪದೇ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರದಲ್ಲಿ ತಮ್ಮ ಕಾರ್ಯದಲ್ಲಿ ತೊಡಗುವಂತೆ ಕೋರಿದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಾದ ಮೋದಿನಸಾಬ ದೊಡ್ಡಮನಿ, ಮೌಲಾಲಿ ದೊಡ್ಮನಿ, ಬುಡನಸಾಬ ಬಡಗಿ, ಪರಶುರಾಮ ಮುಂಡರಗಿ, ಗುಡ್ಡಪ್ಪ ಹೊಸೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.