
ಬೆಂಗಳೂರು, ನ.೪-ಪದವೀಧರ ಪಡೆದಿರುವವರೆಲ್ಲರೂ ಸ್ವಯಂ ಪ್ರೇರಣೆಯಿಂದ ಮುಂದೆಬಂದು ಮತದಾರರ ಪಟ್ಟಿಯಲ್ಲಿ ನೋಂದಣಿ ಯಾಗಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ನಗರದಲ್ಲಿಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬೆಂಗಳೂರು ಪದವೀದರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆ-೨೦೨೪ಕ್ಕೆ ಸಂಬಂಧಿಸಿದಂತೆ ಸಾಮೂಹಿಕ ನೊಂದಣಿ, ದಾಖಲಾತಿಯ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಬೆಂಗಳೂರು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಭಾಗವಹಿಸಬೇಕಾದರೆ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕಿದ್ದು, ಈ ನಿಟ್ಟಿನಲ್ಲಿ ಪದವೀಧರರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಬೇಕು ಎಂದು ಹೇಳಿದರು.
ಎಂಎಲ್‌ಸಿ ಚುನಾವಣೆ ಪ್ರಮುಖ ಚುನಾವಣೆಯಾಗಿದ್ದು, ಎಲ್ಲಾ ಪದವೀಧರರು ನಮೂನೆ-೧೮ ಹಾಗೂ ಶಿಕ್ಷಕರ ಕ್ಷೇತ್ರಕ್ಕಾಗಿ ನಮೂನೆ-೧೯ ಅನ್ನು ಭರ್ತಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲು ತಿಳಿಸಿದರು.
ಪದವೀಧರ ಪಡೆದಿರುವವರೆಲ್ಲರೂ ಮತದಾರರ ಪಟ್ಟಿಯಲ್ಲಿ ನೋಂದಣಿ ಯಾಗಬೇಕು. ಕರಡು ಪಟ್ಟಿ ಬಿಡುಗಡೆಯಾದ ಬಳಿಕ ಮತ್ತೊಮ್ಮೆಯೂ ಹೆಸರನ್ನು ಸೇರ್ಪಡೆಯಾಗಲು ಅವಕಾಶವಿರುತ್ತದೆ. ಎಲ್ಲರೂ ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ನೋಂದಣಿ ಮಾಡಿಕೊಳ್ಳಬೇಕು.
ನಗರದಲ್ಲಿ ಪದವೀದರ ಕ್ಷೇತ್ರಕ್ಕೆ ಇದುವರೆಗೆ ೧೫,೦೦೦ ಅರ್ಜಿಗಳನ್ನು ನೋಂದಣಿ ಮಾಡಿಕೊಳ್ಳಲಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ನೋಂದಣಿ ಮಾಡಿಕೊಳ್ಳಲು ಅವರು ಮನವಿ ಮಾಡಿದರು.
ನವೆಂಬರ್ ೨೦೨೦ಕ್ಕಿಂತ ಮೊದಲು ಭಾರತದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯದಲ್ಲಿ ಪದವಿ ಪಡೆದಿರುವವರು ಪದವಿಯ ಅಂಕಪಟ್ಟಿಗಳ ಮೂಲ ಪ್ರತಿ ಮತ್ತು ಜೆರಾಕ್ಸ್ ಪ್ರತಿ ಮತ್ತು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ನ ಮೂಲ ಮತ್ತು ಜೆರಾಕ್ಸ್ ಪ್ರತಿ, ೨ ಪಾಸ್ ಪೋರ್ಟ್ ಅಳತೆಯ ಫೋಟೋ ನಿಡಬೇಕು. ನಮೂನೆ ೧೮ನ್ನು ಸ್ಥಳದಲ್ಲಿಯೇ ನೀಡಲಾಗುವುದು.
ಅದೇ ರೀತಿ, ಪದವಿ ಪ್ರಮಾಣ ಪತ್ರದ ಧೃಡೀಕರಣಕ್ಕೆ ಸ್ಥಳದಲ್ಲಿಯೇ ಗೆಜೆಟೆಡ್ ಅಧಿಕಾರಿಗಳು ಹಾಜರಿದ್ದು ಧೃಡಿಕರಿಸಲಿದ್ದಾರೆ ಮತ್ತು ಭರ್ತಿ ಮಾಡಿದ ನಮೂನೆ ೧೮ ನ್ನು ಸ್ವೀಕರಿಸಲಾಗುವುದು ಎಂದರು.
ಎಡಿಇಒ ಕೇಂದ್ರ, ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾತನಾಡಿ, ಪದವೀಧರರ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಲು ಎಲ್ಲಾ ಪದವೀಧರರು ಮುಂದೆ ಬರಬೇಕು. ವಿಶೇಷವಾಗಿ ಪದವೀದರರ ಸಂಖ್ಯೆ ಸಾಕಷ್ಟಿದ್ದರೂ ನೋಂದಣಿಯಾಗುವವರ ಸಂಖ್ಯೆ ಕಡಿಮೆಯಿರುವ ಕಾರಣ ಪಾಲಿಕೆ ವತಿಯಿಂದ ವಿಶೇಷ ಅಭಿಯಾನವನ್ನು ಹಮ್ಮಿಕೊಂಡು ಸ್ಥಳದಲ್ಲಿ ಅರ್ಜಿಗಳನ್ನು ಪಡೆಯಲಾಗುತ್ತಿದೆ ಎಂದರು.
ಈ ವೇಳೆ ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಅಜಯ್, ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಗೆಜೆಟೆಡ್ ಅಧಿಕಾರಿಗಳು, ನೊಂದಣಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.