ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ-ಡಾ. ತಳವಾರ

ಬ್ಯಾಡಗಿ , ನ 10- ರಕ್ತದಾನದಿಂದ ಒಂದು ಅಮೂಲ್ಯವಾದ ಜೀವವನ್ನು ಉಳಿಸಬಹುದಾಗಿದ್ದು, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗಬೇಕು ಎಂದು ಜಿಲ್ಲಾ ರಕ್ತನಿಧಿ ಭಂಡಾರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಹೇಳಿದರು.
ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಭ್ರಷ್ಟಾಚಾರ ವಿರೋಧಿ ಜನ ಆಂದೋಲನದ (ನ್ಯಾಸ) ರಾಜ್ಯ ಘಟಕ, ಪರಿಸರ ಸ್ನೇಹಿ ಬಳಗ, ಗ್ರಾಮ ಪಂಚಾಯತ ಕಾರ್ಯಾಲಯ ಮತ್ತು ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರವನ್ನು ಸಸಿಗಳನ್ನು ನೆಟ್ಟು ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ದೇಹದಲ್ಲಿರುವ ರಕ್ತ ಶುದ್ಧಿಯಾಗುವುದಲ್ಲದೆ ಅವರ ಆರೋಗ್ಯವೂ ಸಹ ಸದೃಢವಾಗುತ್ತದೆ ಎಂದರು.
ಶಿಬಿರದ ಸಂಘಟಕರಾದ ಭ್ರಷ್ಟಾಚಾರ ವಿರೋಧಿ ಜನ ಆಂದೋಲನದ ರಾಜ್ಯ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಮಾತನಾಡಿ, ರಕ್ತ ಹೀನತೆಯಿಂದ ಬಳಲುತ್ತಿರುವ ಅಸಂಖ್ಯಾತ ಜನರ ಆರೋಗ್ಯದ ಹಿತದೃಷ್ಟಿಯಿಂದ ರಕ್ತದಾನ ಶಿಬಿರವನ್ನು ನಡೆಸುವ ಮೂಲಕ ಅವರಿಗೆ ಸಕಾಲಕ್ಕೆ ರಕ್ತದ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಕಾರದೊಂದಿಗೆ ರಕ್ತದ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದು, ಕೋವಿಡ್ -19 ನಿಯಮಗಳನ್ನು ಪಾಲಿಸುವ ಮೂಲಕ ರಕ್ತದಾನ ಶಿಬಿರವನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಶಿಬಿರದಲ್ಲಿ 23 ಜನರು ರಕ್ತದಾನವನ್ನು ಮಾಡಿದ್ದು, ರಕ್ತದಾನ ಮಾಡಿದ ಎಲ್ಲರಿಗೂ ಅಭಿನಂದನಾ ಪತ್ರದೊಂದಿಗೆ ಒಂದೊಂದು ಸಸಿಯನ್ನು ವಿತರಿಸಿ ಗೌರವಿಸಲಾಯಿತು. ವೈದ್ಯಾಧಿಕಾರಿ ಬಸವರಾಜ ಕಮತದ, ಪರಿಸರ ಸ್ನೇಹ ಬಳಗದ ರಾಜು ಹುಲ್ಲತ್ತಿ, ನ್ಯಾಸ ಘಟಕದ ಮಹಿಳಾ ಸಂಚಾಲಕಿ ಫರೀದಾ ನದ್ದಿಮುಲ್ಲಾ, ಮಾದೇವಕ್ಕ ಕಾರಿ, ಗ್ರಾಪಂ. ಅಭಿವೃದ್ಧಿ ಅಧಿಕಾರಿ ಪರಶುರಾಮ ಅಗಸನಹಳ್ಳಿ, ಕಾರ್ಯದರ್ಶಿ ಪರಶುರಾಮ ಚೌಟಗಿ, ನಿಂಗಪ್ಪ ದೇವಗಿರಿ, ಹನುಮಂತಪ್ಪ ಹಿರೇಅಣಜಿ, ಡಿ.ಎಚ್. ಬುಡ್ಡನಗೌಡ್ರ, ಮಂಜು ಪುಟ್ಟಣ್ಣನವರ, ಅಣ್ಣಪ್ಪ ಶೇತಸನದಿ, ಹೇಮಂತ ಸರವಂದ, ಬಸನಗೌಡ ಮರಿಗೌಡ್ರ ಮಾಲತೇಶ ಚೊಕ್ಕನಗೌಡ್ರ ಸೇರಿದಂತೆ ಇನ್ನಿತರರು ಶಿಬಿರದಲ್ಲಿ ಉಪಸ್ಥಿತರಿದ್ದರು.