ಸ್ವಪಕ್ಷದ ವಿರುದ್ಧವೇ ಮಾತನಾಡುವುದು ಸರಿಯಲ್ಲ

ಚಿಕ್ಕಬಳ್ಳಾಪುರ,ಸೆ.೫- ಇತ್ತೀಚಿಗೆ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸೋಲು ಅನುಭವಿಸಿದ ನಂತರ ಬಿ.ಜೆ.ಪಿ.ಯ ಮಾಜಿ ಶಾಸಕರೊಬ್ಬರು ಸ್ವಪಕ್ಷದ ನಾಯಕರ ವಿರುದ್ಧ ಮಾತನಾಡುತ್ತಿರುವುದು ವಿಪರ್ಯಾಸ ಆಗಿದ್ದು ಇವರು ತಮ್ಮ ಚಾಳಿಯನ್ನು ಇದೇ ರೀತಿ ಮುಂದುವರಿಸಿದರೆ ಅವರ ವಿರುದ್ಧ ತೀವ್ರ ಆಕ್ರೋಶ ಮತ್ತು ಪ್ರತಿಭಟನೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ ಜೀ.ವಿ. ಮಂಜುನಾಥ್ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಬಯಸಿದ ಮಾಜಿ ಶಾಸಕರು ಒಬ್ಬರು ಪಕ್ಷದ ನಿಷ್ಠೆ ಇಲ್ಲದೆ ವ್ಯಕ್ತಿಪೂಜೆಗೆ ಸೀಮಿತರಾದ ಮತ್ತು ಅಧಿಕಾರಕ್ಕಾಗಿ ಹಪಹಪಿಸುವ ಇವರು ವಿನಾಕಾರಣ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ವಿರುದ್ಧ ಅವರ ಮಾತನಾಡುವುದನ್ನೇ ಕಾಯಕವಾಗಿಸಿಕೊಂಡಿದ್ದಾರೆ. ಪಕ್ಷದ ಶಿಸ್ತು ಮರೆತು ಮಾತನಾಡುವುದು ಸರಿಯಲ್ಲ.
ಈ ಮಾಜಿ ಶಾಸಕರು ಹೇಳುವಂತೆ ಸಂತೋಷ್ ಜೀ ಅವರು ಮುಖ್ಯಮಂತ್ರಿಯಾಗುವ ಉದ್ಧೇಶದಿಂದ ಹಲವು ಮಂದಿ ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿದರು. ಅದೇ ಕಾರಣಕ್ಕೆ ಬಿಜೆಪಿ ಸೋಲನುಭವಿಸಬೇಕಾಯಿತು ಎಂದು ಹೇಳಿದ್ದಾರೆ. ಹಾಗಾದರೆ ಈ ಹಿಂದೆ ಸರ್ಕಾರದಲ್ಲಿ ಸಚಿವರಾಗಿದ್ದ ಸುಮಾರು ೧೮ ಮಂದಿ ಸೋಲನುಭವಿಸಿದ್ದಾರಲ್ಲ? ಅವರೆಲ್ಲರಿಗೂ ಸಂತೋಷ್ ಜೀ ಅವರೇ ಟಿಕೆಟ್ ಕೊಡಿಸಿದ್ದರೇ? ಮತ್ತು ಅವರ ಸೋಲಿಗೂ ಸಂತೋಷ್ ಜೀ ಅವರೇ ಕಾರಣರಾ? ಅಷ್ಟೇಕೆ ಅದೇ ಮಾಜಿ ಶಾಸಕರಿಗೂ ಸಂತೋಷ ಜೀ ಅವರೇ ಟಿಕೆಟ್ ಕೊಡಿಸಿದ್ದರೇ? ನೀವು ಸೋಲಲು ಕಾರಣವೇನು ಎಂಬುದನ್ನು ನೀವೇ ಹೇಳಿ ಎಂದು ಆಗ್ರಹಿಸಿದರು.
ನೀವು ಜನರಲ್ಲಿ ಬೆರೆಯದೆ, ಪಕ್ಷದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡು, ವ್ಯಕ್ತಿಪೂಜೆಯಿಂದ ಮಾತ್ರ ಗೆಲುವು ಸಾಧಿಸಲು ಸಾಧ್ಯ ಎಂದು ಭಾವಿಸಿ ಸೋಲನುಭವಿಸಿದ್ದೀರಿ. ನಿಮ್ಮ ಸೋಲಿಗೆ ಪಕ್ಷವಾಗಲೀ ಪಕ್ಷದ ವರಿಷ್ಠರಾಗಲೀ ಕಾರಣರಲ್ಲ. ಜನತಾ ತೀರ್ಮಾನದ ನಂತರ ಜನರ ತೀರ್ಪಿಗೆ ತಲೆಬಾಗಿ ನಡೆಯುವುದನ್ನು ಬಿಟ್ಟು ನೀವು ವಿನಾಕಾರಣ ನಿಮ್ಮ ವೈಪಲ್ಯಗಳನ್ನು ಮತ್ತೊಬ್ಬರ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದೀರಿ.
ಸಂತೋಷ್ ಜೀ ಅವರು ಎಂಜಿನಿಯರಿಂಗ್ ಪದವೀಧರರು. ಆ ಕಾಲದಲ್ಲಿಯೇ ಅವರು ಉನ್ನತ ಶ್ರೇಣಿಯಲ್ಲಿ ಎಂಜಿನಿಯರಿಂಗ್ ಮಾಡಿದ್ದಾರೆ. ಅವರು ಐಷರಾಮಿ ಜೀವನ ಬೇಕು ಎಂದು ಬಯಸಿದ್ದರೆ ವಿಶ್ವದ ಅತ್ಯುನ್ನತ ಸಂಸ್ಥೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುತ್ತಿದ್ದರು. ಆದರೆ ಇದು ಯಾವುದಕ್ಕೂ ಆಸೆ ಪಡದ ಅವರು ಇಡೀ ಜೀವನವನ್ನು ಸಂಘ ಮತ್ತು ದೇಶಕ್ಕಾಗಿ ಮುಡುಪಾಗಿಟ್ಟಿದ್ದಾರೆ. ಇನ್ನು ಅವರು ಮುಖ್ಯಮಂತ್ರಿಯಾಗುವುದು ರಾಜ್ಯದ ಜನರ ಮತ್ತು ಪಕ್ಷದ ತೀರ್ಮಾನವಾದರೂ ಅದರಲ್ಲಿ ತಪ್ಪೇನಿದೆ ಎಂದರು.