ಸ್ವಪಕ್ಷದ ಮುಖಂಡರ ವಿರುದ್ಧ ಹಳ್ಳಿಹಕ್ಕಿ ಕಿಡಿ

ಮೈಸೂರು,ಡಿ.3:- ಚುನಾವಣಾ ವಿಚಾರದಲ್ಲಿ ವೈಯುಕ್ತಿಕ ಟೀಕೆ ಸರಿಯಲ್ಲ ಎನ್ನುವ ಮೂಲಕ ಸ್ವಪಕ್ಷದ ಮುಖಂಡರ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿ ಕಾರಿದರು.
ಇಂದು ಮೈಸೂರಿನಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪರಿಷತ್ ಗೆ ಮತಚಲಾಯಿಸುವವರು ಶೇ.98 ಭಾಗ ಸ್ವಂತ ಸಾಮಥ್ರ್ಯದಿಂದ ಗೆದ್ದವರು. ಹೀಗಾಗಿ ಈ ಚುನಾವಣೆ ಬಹಳ ವಿಶೇಷವಾದದ್ದು. ಇದನ್ನು ನಾವು ದಿಕ್ಕೆಡಿಸುತ್ತಿದ್ದೇವೆ. 40 ಕೋಟಿಯಿಂದ 1700 ಕೋಟಿ ಆಸ್ತಿ ಘೋಷಣೆ ಮಾಡಲಾಗಿದೆ. ಅವರು ನಮ್ಮ ಸಾರ್ವಭೌಮ ಸದನಕ್ಕೆ ಬರಲು ಅಪೇಕ್ಷೆ ಪಡುತ್ತಿದ್ದಾರೆ.
ಈ ಬಾರಿ ಕರ್ನಾಟಕದಲ್ಲಿ ಕ್ರಾಂತಿಯಾಗಲಿ. ಮೂರು ಪಕ್ಷದ ಮುಖಂಡರು ಸಂದೇಶ ನೀಡಬೇಕು. ಇದರಿಂದ ಏನು ಸಂದೇಶ ಕೊಡುತ್ತಿದ್ದೇವೆ. ಇದು ತಮಾಷೆಯ ಮಾತಲ್ಲ. ಸಿದ್ದರಾಮಯ್ಯನವರ ಸಂದೇಶ ಏನಿವತ್ತು? ಏನು ಸಂದೇಶ ನೀಡುತ್ತಿದ್ದೀರಿ, ಎಲ್ಲೂ ಏನು ಹೇಳುತ್ತಿಲ್ಲ. ಬರಿ ಕೆಲಸಕ್ಕೆ ಬಾರದ ಒಬ್ಬರ ಮೇಲೊಬ್ಬರ ಮೇಲಾಟವಾಗುತ್ತಾ ಇದೆ. ಅವ ಕುಡುಕ ಅಂತಾನೆ. ಮತ್ತೊಬ್ಬ ಕಳ್ಳ ಅಂತಾನೆ ಏನ್ರಿ ಇದು ರಾಜ್ಯದ ಮುಖಂಡರುಗಳು ಚುನಾವಣೆಯಲ್ಲಿ ಏನು ಸಂದೇಶ ಕೊಡುತ್ತಾ ಇದ್ದೀರಿ, ಇನ್ನೂ ಸಮಯ ಇದೆ ಎಂದು ತರಾಟೆಗೆ ತೆಗೆದುಕೊಂಡರು.
ಯುವಕರಿಗೆ ಏನು ಸಂದೇಶ ದುಡ್ಡು ತಗೊಂಡು ಮತ ಹಾಕಿ ಅಂತಾನ..? ಟಿಕೆಟ್ ಕೊಡುವಾಗಲೇ 15 ಕೋಟಿ ಇದ್ದರೆ ಬನ್ನಿ ಅನ್ನೋದ..? ಜನಪ್ರತಿನಿಧಿಗಳು ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಹಾಕಿ. ಚುನಾವಣೆ ಪಾವಿತ್ರ್ಯತೆ ಎತ್ತಿ ಹಿಡಿಯಿರಿ. ಯಾರಿಗೂ ಹೆದರದೆ ಮುಲಾಜು ಇಲ್ಲದೆ ಮತ ಹಾಕಿ ಎಂದು ಕರೆ ನೀಡಿದರು.
ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಏನು ಸಂದೇಶ ಕೊಡುತ್ತಾ ಇದ್ದೀರಾ ? ಬರೀ ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಿದ್ದೀರಾ ಈಗಲೂ ಕಾಲ ಮಿಂಚಿಲ್ಲ ಎಚ್ಚೆತ್ತುಕೊಳ್ಳಿ. ನಿಮ್ಮ ನಿಮ್ಮ ಪಕ್ಷದವರಿಗೆ ಕರೆ ಕೊಡಿ. ನನ್ನ ಬಳಿಯೂ ಕೆಲವು ಸದಸ್ಯರು ಬಂದಿದ್ದರು. ನನ್ನ ಬಳಿಯೇ ಬಂದು ಬಜಾರ್ ಕೇಳಿದರು. 50 ಸಾವಿರ ಮಂಡ್ಯದಲ್ಲಿ, ಹಾಸನದಲ್ಲಿ 1 ಲಕ್ಷ ಅಂತಾರೆ. ಮೈಸೂರಲ್ಲಿ ಎಷ್ಟು ಇದೆ ಬಜಾರ್ ಹೇಳಿ ಸರ್ ಅಂದರು. ನಾಯಕರು ಓಟ್ ಬಜಾರ್ ಮಾಡಿದ್ದಾರೆ ಎಂದು ಕಿಡಿಕಾರಿದರು.
ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ವಿಚಾರಕ್ಕೆ ಪ್ರತಿಕ್ರಿಯಿಸಿ ಗೋಪಾಲಕೃಷ್ಣ, ವಿಶ್ವನಾಥ್ ಇಬ್ಬರು ರಿಯಲ್ ಎಸ್ಟೇಟ್ ಗಿರಾಕಿಗಳು. ಅವರಿಬ್ಬರದು ಏನೇನು ಇದೆಯೋ ಯಾರಿಗೆ ಗೊತ್ತು? ಅದನ್ನು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ ಎಂದರು.
ಸಚಿವ ಎಸ್.ಟಿ ಸೋಮಶೇಖರ್ ವಿರುದ್ದ ವಾಗ್ದಾಳಿ ನಡೆಸಿ ಚುನಾವಣೆ ವಿಚಾರದಲ್ಲಿ ವೈಯುಕ್ತಿಕ ಟೀಕೆ ಸರಿಯಲ್ಲ. ಒಬ್ಬ ಮಂತ್ರಿಯಾದವರಿಗೆ ಇದು ಶೋಭೆ ತರುವುದಿಲ್ಲ. ಇದರಿಂದ ಬಾಬು ಅವರ ಮನೆಯವರಿಗೆ ಎಷ್ಟು ನೋವಾಗಿದೆ. ಮೈಸೂರು ಜೆಡಿಎಸ್ ಅಭ್ಯರ್ಥಿಗೂ ನೋವಾಗಿದೆ, ಸೋಮಶೇಖರ್ ವೈಯಕ್ತಿಕ ಟೀಕೆ ಸರಿಯಲ್ಲ ಎಂದರು.
ಪ್ರಧಾನಿ ಮೋದಿ, ಹೆಚ್.ಡಿ ದೇವೇಗೌಡ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ ಹಾಲಿ ಪ್ರಧಾನಿ ಮಾಜಿ ಪ್ರಧಾನಿ ಭೇಟಿ ಸೌಜನ್ಯದ ಭೇಟಿ ಎಂದರು. ಮೋದಿ ಕುಟುಂಬ ರಾಜಕಾರಣದ ಬಗ್ಗೆ ಹೇಳಿದ್ದರು. ಗೆದ್ದಲಿನ ರೀತಿ ಕಾಡುತ್ತಿದೆ ಅಂದರು. ಅದನ್ನೇ ಕೆಲವರು ರಾಜಕಾರಣ ಮಾಡಿದರು. ಮಿಕ್ಕವರು ಮೋದಿಯಿಂದ ಸೌಜನ್ಯ ಕಲಿಯಬೇಕು. ಏಕವಚನದಲ್ಲಿ ಎಲ್ಲರ ಬಗ್ಗೆ ಮಾತನಾಡುವುದಲ್ಲ ಎನ್ನುವ ಮೂಲಕ ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.
ಕೋವಿಡ್ ರೂಪಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿ ತಜ್ಞರು ಇದರ ತೀವ್ರತೆ ಬಗ್ಗೆ ಹೇಳಿದ್ದಾರೆ. ಆದರೆ ಶಾಲಾ ಕಾಲೇಜುಗಳಲ್ಲಿ ದನ ತುಂಬಿದಂತೆ ತುಂಬಲಾಗುತ್ತಿದೆ. ಶಿಕ್ಷಣ ಸಚಿವರು ಏನು ಮಾಡುತ್ತಿದ್ದಾರೆ? ಹೆಚ್ಚು ಕಡಿಮೆಯಾದರೆ ದೊಡ್ಡ ಅನಾಹುತವಾಗುತ್ತದೆ. ಇದು ಮಕ್ಕಳ ವಿಚಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ ಅವರು ಹೊಸ ವೈರಸ್ ರಾಪಿಡ್ ಆಗಿ ಹರಡುತ್ತಿದೆ. ಇದರಿಂದ ಮಕ್ಕಳಿಗೆ ಅನಾಹುತ ಆಗದಂತೆ ಎಚ್ಚರವಹಿಸಬೇಕು. 0 ದಿಂದ 7ವರೆಗೆ ಮಕ್ಕಳಿಗೆ ಮನೆಯಲ್ಲೇ ಪಾಠ ಆಗಬೇಕು. ಮೊದಲ ರ್ಯಾಂಕ್ ಬರುವವರು ಶಾಲೆಯಿಂದ ಕಲಿತು ಬರುವುದಿಲ್ಲ. ಅವಸರದಲ್ಲಿ ಶಾಲಾ ಕಾಲೇಜುಗಳ ಬಗ್ಗೆ ನಿರ್ಧಾರ ಬೇಡ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಮಾಡಬೇಕು ಎಂದರು