ಸ್ವದೇಶಿ ವಸ್ತುಗಳ ಬಳಕೆಯಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ

ಕಲಬುರಗಿ,ನ.30:ಪ್ರತಿಯೊಬ್ಬ ಭಾರತೀಯ ವಿದೇಶಿ ವಸ್ತುಗಳಿಗೆ ಮಾರು ಹೋಗದೆ, ಸ್ವದೇಶಿ ವಸ್ತುಗಳನ್ನು ಬಳಸಬೇಕು. ನಮ್ಮ ದೇಶದಲ್ಲಿಯೇ ಉತ್ಪಾದನೆಯಾದ ಸರಕು-ಸೇವೆಗಳನ್ನು ಬಳಸುವುದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ತಲಾದಾಯ, ರಾಷ್ಟ್ರಾದಾಯ ಹೆಚ್ಚಳವಾಗುವದರ ಜೊತೆಗೆ ನಮ್ಮ ದೇಶದ ಸಂಪತ್ತು ಬೇರೆ ರಾಷ್ಟ್ರಗಳಿಗೆ ಹರಿದು ಹೋಗದೆ ನಮ್ಮಲ್ಲೆ ಉಳಿದು ರಾಷ್ಟ್ರ ತೀರ್ವವಾಗಿ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಸ್ವದೇಶಿ ಚಿಂತಕ ಉದಯಕುಮಾರ ಸಾಲಿ ಹೇಳಿದರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್‍ನಲ್ಲಿರುವ ‘ಬಸವ ಸ್ವದೇಶಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ಸ್ವದೇಶಿ ಚಳುವಳಿಯ ರಾಜೀವ ದೀಕ್ಷಿತರ ಜನ್ಮ ಹಾಗೂ ಸ್ಮರಣೋತ್ಸವ ದಿನ’ವಾದ ‘ಸ್ವದೇಶಿ ದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಬಳಗದ ಅಧ್ಯಕ್ಷ, ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಪ್ರತಿಯೊಬ್ಬ ಭಾರತೀಯರಲ್ಲಿ ದೇಶದ ಬಗ್ಗೆ ಅಪಾರವಾದ ಕಾಳಜಿ ಇರಬೇಕು. ವಿದೇಶಿ ವಸ್ತುಗಳನ್ನು ಬಳಸಬಾರದು. ನಮ್ಮ ದೇಶದ ವಸ್ತುಗಳನ್ನು ಬಳಸುವುದರಿಂದ ಪ್ರತಿಯೊಬ್ಬರು ಸ್ವಾವಲಂಬನೆ ಸಾಧಿಸಬಹುದಾಗಿದೆ. ಚೀನಾ ದೇಶದ ಒಟ್ಟು ಆರ್ಥಿಕತೆಯಲ್ಲಿ ನಮ್ಮ ದೇಶದ ಕೊಡುಗೆ ಶೇ.40ರಷ್ಟು ಆಗಿದ್ದು, ಚೀನಾ ವಸ್ತುಗಳನ್ನು ನಾವು ಬಳಸದೆ, ನಮ್ಮ ದೇಶದಲ್ಲಿಯೇ ಉತ್ಪಾದನೆಯಾದ ವಸ್ತುಗಳನ್ನೆ ಉಪಯೋಗಿಸುವದರಿಂದ ಈ ಆದಾಯ ನಮ್ಮ ದೇಶಕ್ಕೆ ಬರುವದರಿಂದ, ನಮ್ಮ ರಾಷ್ಟ ಸದೃಢವಾಗಲು ಸಾಧ್ಯವಿದೆ. ಇದರ ಬಗ್ಗೆ ಜಾಗೃತಿ ಮೂಡಬೇಕು. ‘ಆಜಾದಿ ಬಜಾವೋ ಆಂದೋಲನ’ದ ಮೂಲಕ ರಾಜೀವ ದೀಕ್ಷಿತ ಅವರು ಅವರು ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಪರಮೇಶ್ವರ ದೇಸಾಯಿ, ಶರಣಬಸಪ್ಪ ಮಾಲಿ ಬಿರಾದಾರ ದೇಗಾಂವ, ಮಹಾದೇವ ಎಸ್.ನಿಂಬಾಳ, ಗುರುನಾಥ ಹೂಗಾರ, ಸಿದ್ದು ಜಮಾದಾರ, ಪಂಡಿತ ಕಲಶೆಟ್ಟಿ, ಶ್ರೀಶೈಲ್ ಗಡ್ಡದಮಠ, ಶಿವಕುಮಾರ ವಗ್ಗಾಲೆ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.