ಸ್ವದೇಶಿ ಲಸಿಕೆಯಂತೆ ಸ್ವದೇಶಿ ವಸ್ತುಗಳು ಸಹ ಬಳಕೆಯಾಗಲಿ

 ಚಿತ್ರದುರ್ಗ. ಜೂ.೧೦; ನಗರಗಳಿಗೆ ಗ್ರಾಮಸ್ಥರು ಮರು ವಲಸೆ ಹೋಗುತ್ತಿರುವುದರಿಂದ ನಗರಗಳಲ್ಲಿ ಜನಸಾಂದ್ರತೆ ಹೆಚ್ಚಾಗಿ, ಕೊರೋನ ಮಹಾಮಾರಿ ಮತ್ತೆ ಮರುಕಳಿಸುವ ಸಂಭವವಿರುತ್ತದೆ. ಹಾಗಾಗಿ ಗ್ರಾಮಗಳಿಗೆ ವಾಪಾಸು ಬಂದ ಗ್ರಾಮಸ್ಥರನ್ನ ಹಳ್ಳಿಗಳಲ್ಲಿ ಹಿಡಿದಿಟ್ಟುಕೊಳ್ಳುವಂತಹ ಯೋಜನೆಗಳನ್ನು ರೂಪಿಸಬೇಕು. ಅವರಿಗೆ ಅಲ್ಲಿಯೇ ಉದ್ಯೋಗ ಒದಗಿಸಿ, ಅವರ ಬದುಕಿಗೆ ಆಸರೆಯಾಗುವಂಥ ಏರ್ಪಾಡು ಮಾಡಬೇಕು. ಸ್ವದೇಶಿ ವಸ್ತುಗಳ ಬಳಕೆ ಮಾಡುವುದರಿಂದ ನಾವು ಗ್ರಾಮಸ್ಥರಿಗೆ ಆರ್ಥಿಕ ಸಹಾಯ ಮಾಡಬಹುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ನಗರದ ಹಳೇ ಮಾಧ್ಯಮಿಕ ಪ್ರೌಢಶಾಲಾ ತರಕಾರಿ ಮಾರುಕಟ್ಟೆ ಮೈದಾನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ “ಸ್ವದೇಶಿ ಲಸಿಕೆಯಂತೆ ಸ್ವದೇಶಿ ವಸ್ತುಗಳು ಬಳಕೆಯಾಗಲಿ” ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಹಾನಗರಗಳಲ್ಲಿ ಉತ್ಪಾದಿತ ವಸ್ತುಗಳನ್ನು ನಾವು ಸ್ವದೇಶಿ ಎಂದು ತಪ್ಪು ಅರ್ಥ ಮಾಡಿಕೊಂಡಿದ್ದೇವೆ, ನಮ್ಮ ಸುತ್ತಮುತ್ತ, ಹತ್ತಾರು ಕಿಲೋ ಮೀಟರ್ ಹತ್ತಿರದಲ್ಲಿ ತಯಾರಾದ ವಸ್ತುಗಳನ್ನು ಸ್ವದೇಶಿಯೆಂದು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಆಗ ನಾವು ನಮ್ಮ ಸಮೀಪ ಸ್ಥಳದ ಉತ್ಪಾದನೆಯನ್ನ ಬಳಸಬೇಕಾಗುತ್ತದೆ. ಮನುಷ್ಯ ತನ್ನ ಸುತ್ತಮುತ್ತ ನಡೆದಾಡುವಂಥ ಪರಿಸರವೇ ಅವನ ಸ್ವದೇಶಿ. ಅದಕ್ಕಿಂತ ಮಿಗಿಲಾಗಿ ಎಲ್ಲೇ ಉತ್ಪಾದನೆ ಆದರು ಅದು ವಿದೇಶಿ ತರವಾಗಿ ಬಿಡುತ್ತದೆ. ಆದರೆ ನಾವಿಂದು ಸಾವಿರಾರು ಕಿಲೋಮೀಟರ್ ದೂರದಿಂದ ಬರುವ ವಸ್ತುವನ್ನು ಸಹ ಸ್ವದೇಶಿ ಎಂದು ಅರ್ಥ ಮಾಡಿಕೊಂಡು, ಮಹಾನಗರಗಳಾದ ಮುಂಬಯಿ, ದೆಹಲಿ, ಕಲ್ಕತ್ತಾದಲ್ಲಿ ತಯಾರಾದ ವಸ್ತುಗಳನ್ನು ಸ್ವದೇಶಿಯೆಂದು ಖರೀದಿ ಮಾಡುತ್ತಿರುವುದರಿಂದ, ಸುತ್ತಮುತ್ತಲಿರುವ ಗ್ರಾಮಸ್ಥರಿಗೆ ಕೆಲಸವಿಲ್ಲದಂತಾಗಿದೆ. ಅವರು ಆರ್ಥಿಕವಾಗಿ ಅವರು ದುರ್ಬಲರಾಗಿದ್ದಾರೆ. ಇದಕ್ಕಾಗಿ ಗ್ರಾಮಸ್ಥರು ನಿರುದ್ಯೋಗದಿಂದ ನಗರಗಳ ಕಡೆ ವಲಸೆ ಹೋಗುತ್ತಿದ್ದಾರೆ. ಅವರನ್ನ ತಡೆಯಲು ಯಾರಿಗೂ ಸಾದ್ಯವಿಲ್ಲದಾಗಿದೆ. ಅವರ ಬದುಕಿಗೆ ಆಸರೆಯಾಗುವಂತಹ ಸ್ವದೇಶಿ ತತ್ವವನ್ನು ಅಳವಡಿಸಿಕೊಳ್ಳಲು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಪ್ರಕಾಶ್, ಕಂಟ್ರಾಕ್ಟರರ ದಿನೇಶ್, ರಮೇಶ, ಮುಂತಾದವರು ಹಾಜರಿದ್ದರು