ಸ್ವದೇಶಿ ತತ್ವದ ಶ್ರೀ ಮಾಧವ ಗೋಶಾಲೆ

** ವಿಜಯೇಂದ್ರ ಕುಲಕರ್ಣಿ
ಕಲಬುರಗಿ ನ 23: ದೇಸಿಗೋತಳಿ ಸಂವರ್ಧನೆ, ಉದ್ಯೋಗ, ವಿಷಮುಕ್ತ ಆಹಾರ,ಸ್ವಾವಲಂಬನೆ ಮೂಡಿಸಲು ಆರಂಭವಾದ ಕಲಬುರಗಿಯ ಶ್ರೀಮಾಧವ ಗೋಶಾಲೆಗೆ ಬರುವ ಸಂಕ್ರಮಣಕ್ಕೆ 5 ವರ್ಷ ತುಂಬುತ್ತದೆ.
ಗುಲಬರ್ಗ ವಿಶ್ವ ವಿದ್ಯಾಲಯದ ಹಿಂದೆ ಕುಸನೂರು ಗ್ರಾಮದ ಬಳಿ 5 ಎಕರೆ ವಿಸ್ತಾರದ ಬಾಡಿಗೆ ಜಮೀನಿನಲ್ಲಿ ಶ್ರೀ ಮಾಧವ ಗೋಶಾಲೆ ತಲೆ ಎತ್ತಿ ನಿಂತಿದೆ.
ದೇವಣಿ, ಕಿಲಾರಿ,ಜವಾರಿ,ಗಿರ್,ಥಾರ್ ಪಾರ್ಕರ್,ಅಮೃತ ಮಹಲ್ ದೇಸಿ ತಳಿಯ ಒಟ್ಟು 117 ಹಸು ಕರುಗಳು, ಎತ್ತುಗಳು ಗೋಶಾಲೆಯಲ್ಲಿವೆ.
ಆರೋಗ್ಯ ಸಮಸ್ಯೆ ಇರುವ ಹಸುಗಳನ್ನು ಸಾಕಲಾದಗೇ ರೈತರು ಇಲ್ಲಿಗೆ ತಂದು ಬಿಟ್ಟಿದ್ದಾರೆ.ಇಂತಹ ಹಸುಗಳಿಗೆ ಇಲ್ಲಿ ಆರೈಕೆ ಮಾಡಲಾಗುತ್ತದೆ.
ಕೆಲವರು ಗೋಶಾಲೆಗೆ ಪ್ರೀತಿಯಿಂದ ಮೇವು ಇತ್ಯಾದಿ ತಂದು ನೀಡುತ್ತಾರೆ.
ಗೋಮಯ ( ಸಗಣಿ) ಮತ್ತು ಗೋಮೂತ್ರದಿಂದ 33 ಉತ್ಪನ್ನ ತಯಾರಿಸುವ ತಾಂತ್ರಿಕ ವ್ಯವಸ್ಥೆ ಇಲ್ಲಿದೆ.ಗೋಅರ್ಕ,ಗೋನೈಲ್ (ಫಿನಾಯಿಲ್), ವಿಭೂತಿ,ಜೀವಾಮೃತ,ಧೂಪ ಬತ್ತಿ, ಪೂಜಾ ಮಂಟಪ,ಗಣೇಶ ಮೂರ್ತಿ,ಗಿಫ್ಟ್ ಐಟಂಗಳು,ಸೊಳ್ಳೆ ಬತ್ತಿ,ಹಣತೆ ಇತ್ಯಾದಿಗಳನ್ನು ತಯಾರಿಸಲಾಗುತ್ತದೆ.ರೋಸ್ ವಾಟರ್ ತಯಾರಿಕೆ , ಎರೆಹುಳು ಬ್ಯಾಂಕ್ ಕೂಡ ಇಲ್ಲಿದ್ದು ಎರೆಹುಳ ಗೊಬ್ಬರ ಸಿದ್ಧಪಡಿಸಲಾಗುತ್ತಿದೆ.ಗೋವಿನ ಉತ್ಪನ್ನಗಳ ತಯಾರಿಕೆ ಬಗ್ಗೆ ಆಸಕ್ತಿ ಇದ್ದವರಿಗೆ ವಸತಿ ಯೊಂದಿಗೆ ಉಚಿತ ತರಬೇತಿ ನೀಡಲಾಗುತ್ತಿದೆ ಎನ್ನುತ್ತಾರೆ ಶ್ರೀ ಮಾಧವ ಗೋಶಾಲೆಯ ಗೋಸೇವಕರಾದ ಮಹೇಶ ಬೀದರಕರ ಅವರು.
ಶ್ರೀಮಾಧವ ಗೋಶಾಲೆಯಲ್ಲಿ ತಯಾರಾದ ಉತ್ಪನ್ನಗಳು ನಗರದ ಸ್ವದೇಶಿ ಮಳಿಗೆಗಳಲ್ಲಿ ಲಭ್ಯ.ಪ್ರತಿ ಸೋಮವಾರ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸ್ಟಾಲ್ ಹಾಕಲಾಗುತ್ತದೆ.
**
ಐಎಸ್‍ಒ ಪ್ರಮಾಣಪತ್ರ
ಶ್ರೀ ಮಾಧವ ಗೋಶಾಲೆಗೆ ಗೋವುಗಳ ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆ,ಆರೈಕೆ,ಉಪಚಾರ,ದೇಸಿ ಗೋತಳಿಗಳ ಅಭಿವೃದ್ಧಿ ಮತ್ತು ಪಂಚಗವ್ಯ ಉತ್ಪನ್ನಗಳ ಸುವ್ಯಸ್ಥಿತ ಆಡಳಿತ ಮತ್ತು ಸಮರ್ಥ ನಿರ್ವಹಣೆಯನ್ನು ಪ್ರಮಾಣೀಕರಿಸುವ ಐಎಸ್ ಒ 9001-2015 ಪ್ರಮಾಣಪತ್ರ ದೊರೆತಿದೆ.ಈ ಪ್ರಮಾಣಪತ್ರ ಪಡೆದ ರಾಜ್ಯದ 2 ನೆಯ ಗೋಶಾಲೆ ಮತ್ತು .ಬಿ ಎಸ್ ಒ 9001 2015 ಪ್ರಮಾಣಪತ್ರ ಪಡೆದ ಮೊದಲ ಗೋಶಾಲೆ ಇದಾಗಿದೆ.


ಗೋವು ಕೇವಲ ಹಾಲಿಗಾಗಿ ಅಲ್ಲ. ರೈತರು, ರೈತ ಮಹಿಳೆಯರು ಮನೆಯಲ್ಲಿಯೇ ಗೋವುಗಳ ಸಗಣಿ ಮತ್ತು ಮೂತ್ರದಿಂದ ಉಪ ಉತ್ಪನ್ನಗಳನ್ನು ತಯಾರಿಸಿ, ಸ್ವಾವಲಂಬನೆ ಸಾಧಿಸಬಹುದು.
ಮಹೇಶ ಬೀದರಕರ -ಗೋಸೇವಕರು (94498 38931 )