ಸ್ವದೇಶದತ್ತ ೧೩೫ ಭಾರತೀಯರು

ಸೂಡಾನ್ ಸಂಘರ್ಷ
ನವದೆಹಲಿ,ಏ.೨೬- ಸೂಡಾನ್‌ನಲ್ಲಿ ಕಳೆದ ೧೨ ದಿನಗಳಿಂದ ದೇಶದ ಸೇನೆ ಮತ್ತು ಅರೆಸೇನಾ ಗುಂಪಿನ ನಡುವೆ ಸಂಘರ್ಷದಿಂದ ಸುಮಾರು ೪೦೦ ಜನರು ಸಾವನ್ನಪ್ಪಿದ್ದಾರೆ. ಈ ನಡುವೆ ಸಂಘರ್ಷ ಪೀಡಿತ ಸೂಡಾನ್ ನಿಂದ ೧೩೫ ಭಾರತೀಯರ ಮೂರನೇ ತಂಡ ತಾಯ್ನಾಡಿನತ್ತ ವಾಪಾಸ್ ಬರುತ್ತಿದ್ದಾರೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಮುರುಳೀಧರನ್ ತಿಳಿಸಿದ್ದಾರೆ.
ಪೋಟ್ ಸೂಡಾನ್‌ನಿಂದ ೧೩೫ ಭಾರತೀಯರನ್ನು ಒಳಗೊಂಡ ೩ನೇ ಬ್ಯಾಚ್ ವಿಮಾನದ ಮೂಲಕ ಜೆಡ್ಡಾಕ್ಕೆ ಬಂದಿಳಿದಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಆಫ್ರಿಕನ್ ರಾಷ್ಟ್ರವಾದ ಸುಡಾನ್ ಸಂಘರ್ಷದಲ್ಲಿ ಸಿಲುಕಿರುವ ಸುಮಾರು ೩ ಸಾವಿರ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ “ಆಪರೇಷನ್ ಕಾವೇರಿ” ಅಡಿಯಲ್ಲಿ ಭಾರತೀಯರ ಸ್ಥಳಾಂತರಕ್ಕೆ ಮುಂದಾಗಿದೆ.
ಸೂಡಾನ್‌ನಲ್ಲಿ ಸಿಲುಕಿರುವ ಸುಮಾರು ೩,೦೦೦ ಭಾರತೀಯ ಪ್ರಜೆಗಳ ಪೈಕಿ, ಮೂರನೇ ತಂಡವನ್ನು ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಎರಡನೇ ತಂಡದಲ್ಲಿ ಭಾರತೀಯ ವಾಯಪಡೆಯ ವಿಮಾನದ ಮೂಲಕ ೧೩೫ ಪ್ರಯಾಣಿಕರೊಂದಿಗೆ ಪೊರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ತಲುಪಿದ್ದಾರೆ ಎಂದು ಹೇಳಿದ್ದಾರೆ.
ಆಪರೇಷನ್ ಕಾವೇರಿಯಡಿ ತ್ವರಿತ ಕ್ರಮ ಕೈಗೊಂಡು ಭಾರತೀಯರ ಸ್ಥಳಾಂತರ ಕಾರ್ಯ ನಡೆದಿದೆ, ಎಲ್ಲಾ ಭಾರತೀಯ ಪ್ರಜೆಗಳನ್ನು ಸುಡಾನ್ ರಾಜಧಾನಿ ಖಾರ್ಟೂಮ್ ಮತ್ತು ಸಂಘರ್ಷ ಪೀಡಿತ ಸ್ಥಳಗಳಿಂದ ಸ್ಥಳಾಂತರ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸೂಡಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಭಾರತ ಸರ್ಕಾರ ನಿಯಂತ್ರಣ ಕೊಠಡಿ ತೆರೆದಿದೆ ಎಂದು ಹೇಳಿದ್ದಾರೆ.
ಮೊದಲ ತಂಡದಲ್ಲಿ ೨೭೮ ಭಾರತೀಯರು ನೌಕಾ ಹಡಗು ಐಎನ್‌ಎಸ್ ಸುಮೇಧಾ ಮೂಲಕ ಭಾರತದತ್ತ ಹೊರಟಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ವಾಯುಪಡೆಯ ಸಿ-೧೩೦ಎ ಹೆವಿ-ಲಿಫ್ಟ್ ಸಾರಿಗೆ ವಿಮಾನ ಸ್ಥಳಾಂತರಿಸುವ ಕಾರ್ಯಾಚರಣೆಗಾಗಿ ಸೂಡಾನ್ ತಲುಪಿದೆ ಎಂದು ತಿಳಿಸಿದ್ದಾರೆ.