ಸ್ವತಂತ್ರ ಭಾರತದಲ್ಲೊಂದು ಸ್ವಾತಂತ್ರ್ಯ ಚಳುವಳಿ : ಶಿವಕುಮಾರ ಕಟ್ಟೆ

ಬೀದರ, ಸೆ 16 : ಸತ್ಯ, ಅಹಿಂಸೆ, ಸತ್ಯಾಗ್ರಹದಿಂದ ಭಾರತ ದೇಶ ಸ್ವಾತಂತ್ರ್ಯ ಪಡೆಯಿತಾದರೂ ನಮ್ಮ ಈಗಿನ ಕಲ್ಯಾಣ ಕರ್ನಾಟಕ ಭಾಗ ಮತ್ತೊಂದು ಸ್ವಾತಂತ್ರ್ಯ ಚಳುವಳಿಯನ್ನು ಮಾಡಿ ರಕ್ತಕ್ರಾಂತಿಯಿಂದ ಸ್ವಾತಂತ್ರ್ಯ ಪಡೆಯಿತೆಂದು ಸಾಹಿತಿ ಪೆÇ್ರ. ಶಿವಕುಮಾರ ಕಟ್ಟೆ ನುಡಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಕಾಸ ಅಕಾಡೆಮಿ ಅವರ ಸಂಯುಕ್ತಾಶ್ರಯದಲ್ಲಿ ಶ್ರೀನಿವಾಸ್ ನಾಯಕ್ ಅವರು ಬರೆದಿರುವ “ಹೈದರಾಬಾದ್ ಮುಕ್ತಿ ಆಂದೋಲನ ವೀರಗಾಥೆ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ಪರಿಚಯ ಮಾಡುತ್ತ, ನಿಜಾಮ ಸರಕಾರದ ಅನೇಕ ದೌರ್ಜನ್ಯ, ಅತ್ಯಾಚಾರ, ಕಿರುಕುಳ, ಲೂಟಿ, ಮತಾಂತರ ವಿರುದ್ಧ ಇಲ್ಲಿನ ಜನ ದಂಗೆ ಎದ್ದಿದ್ದರು. ಓರ್ವ ಗರ್ಭಿಣಿ ಹೆಣ್ಣುಮಗಳೆನ್ನುವ ಕನಿಷ್ಠ ಕನಿಕರವೂ ಇಲ್ಲದೇ ರಜಾಕಾರರು ಗರ್ಭಿಣಿ ಮಹಿಳೆಯ ಹೊಟ್ಟೆಗೆ ಒದ್ದು ಗರ್ಭಪಾತ ಮಾಡಿರುವ ಘಟನೆ ಶ್ರೀನಿವಾಸ ನಾಯಕ್ ಅವರು ತಮ್ಮ ಪುಸ್ತಕದಲ್ಲಿ ಮಾಹಿತಿಯನ್ನು ಒದಗಿಸಿದ್ದಾರೆ. ಪುಸ್ತಕದಲ್ಲಿ ಒದಗಿಸಲಾದ ಮಾಹಿತಿಗಳು ಅತ್ಯಂತ ರೋಚಕ ಮತ್ತು ಮನಕಲಕುವಂತೆ ಇವೆ ಎಂದು ಅಭಿಪ್ರಾಯ ಪಟ್ಟರು. ಆಗಷ್ಟ್ 15, 1947ರಂದು ಭಾರತ ಸ್ವಾತಂತ್ಯವಾದರೂ ಸ್ವತಂತ್ರ ಭಾರತದಲೊಂದು ಸ್ವಾತಂತ್ರ್ಯ ಚಳುವಳಿ ನಡೆದದ್ದು ನಮ್ಮ ಮುಂದಿನ ಪೀಳಿಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು.

‘ಹೈದರಾಬಾದ್ ಮುಕ್ತಿ ಅಂದೋಲನ ವೀರಗಾಥೆ’ ಪುಸ್ತಕ ಲೋಕಾರ್ಪಣೆ ಮಾಡಿದ ಕರ್ನಲ್ ಶರಣಪ್ಪ ಸಿಕೇನಪೂರ ನಮ್ಮ ಭಾಗದ ಗೋರ್ಟಾ ಎರಡನೇ ಜಲಿಯನ್ ವಾಲಾ ಬಾಗ ಎಂದು ಕರೆಯಿಸಿಕೊಂಡಿದ್ದು ಇಲ್ಲಿನ ನೂರಾರು ಮುಗ್ಧ ಹಾಗೂ ಅಮಾಯಕರನ್ನು ಬಾವಿಗೆ ಹಾಕಿ ಹತ್ಯೆಗೈದಿರುವುದು ನಾವೆಂದು ಮರೆಯಲು ಸಾಧ್ಯವಿಲ್ಲ. ಸದರಿ ಪುಸ್ತಕ ಇಂದಿನ ಪೀಳಿಗೆಗೆ ಇತಿಹಾಸ ಅವಲೋಕಿನ ಮಾಡಲು ದಿವ್ಯ ಗ್ರಂಥ ಇದಾಗಿದೆ. ಕೇವಲ 45 ಪುಟಗಳ ಪುಸ್ತಕ ಕೇವಲ 50 ರೂ ಇದ್ದು ಎಲ್ಲರೂ ಪಡೆದು ಓದಲು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ಸಾಪ. ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ ಇಂದು ಯುವಪೀಳಿಗೆಗೆ ಕಲ್ಯಾಣ ಕರ್ನಾಟಕದ ಇತಿಹಾಸ ಪರಂಪರೆ ತಿಲಿಸುವುದು ಅವಶ್ಯಕ. ನಾವು ಸ್ವಾತಂತ್ರ್ಯ ಹೇಗೆ ಪಡೆದಿದ್ದೇವೆಂಬುದು ಅರಿತು ಕೊಳ್ಳಲು ಈ ಪುಸ್ತಕ ಸಹಕಾರಿ ಎಂದರು. ಅಖಿಲ ಭಾರತ ಸಾಹಿತ್ಯ ಪರಿಷದ್ ಅಧ್ಯಕ್ಷರಾದ ಶ್ರೀಮತಿ ರಾಣಿ ಸತ್ಯಮೂರ್ತಿ ಅತಿಥಿಗಳಾಗಿ ಆಗಮಿಸಿ ಮಕ್ಕಳಿಗೆ ಇತಿಹಾಸ ಓದುವ ಹವ್ಯಾಸ ಮೂಡಿಸಬೇಕೆಂದರು. ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕರಾದ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಯುವ ಘಟಕದ ಅಧ್ಯಕ್ಷ ಗುರುನಾಥ ರಾಜಗಿರಾ ನಿರೂಪಿಸಿದರು. ಕಸಾಪ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಸ್ವಾಗತಿಸಿದರು ಕೊನೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಟಿ.ಎಂ.ಮಚ್ಚೆ ವಂದಿಸಿದರು.