ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ:ರವೀಂದ್ರ ಸ್ವಾಮಿ

ಔರಾದ:ಮಾ.25: ಸ್ವಜನ ಪಕ್ಷಪಾತ, ಚಮಚಾಗಿರಿ ಮತ್ತು ಭ್ರಷ್ಟಾಚಾರ ನಿರ್ಮೂಲನೆಯ ಜೊತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒಮ್ಮೆ ನನ್ನ ಜೊತೆ ಕೈಜೋಡಿಸಿ ಎಂದು ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಏಕತಾ ಜನಾಶೀರ್ವಾದ ಯಾತ್ರೆಯಲ್ಲಿ ಮತದಾರ ಪ್ರಭುಗಳಿಗೆ ಮನವಿ ಮಾಡಿಕೊಂಡರು.

ಔರಾದ ತಾಲೂಕಿನ ಸಂಗಮ, ಖೇಡ್, ಚಾಂಡೇಶ್ವರ, ಹೊರಂಡಿ, ಸೊನಾಳವಾಡಿ, ಹುಲಸೂರ ಮತ್ತು ಕಲಗಾಪುರ ಗ್ರಾಮದಲ್ಲಿ ಹಮ್ಮಿಕೊಂಡ ಏಕತಾ ಜನಾಶೀರ್ವಾದ ಯಾತ್ರೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ನಮ್ಮ ತಂಡ ಯಾವುದೇ ಗ್ರಾಮಕ್ಕೆ ಹೋದರೂ ಸಾವಿರಾರು ಜನರು ಸಾಥ್ ನೀಡುತ್ತಿದ್ದಾರೆ. ಏಕೆಂದರೆ ನನ್ನಲ್ಲಿ ಸ್ವಜನ ಪಕ್ಷಪಾತ, ಕಾಪಟ್ಯ ಮತ್ತು ಭೇದಭಾವ ಇಲ್ಲ. ಎಲ್ಲಾ ಜಾತಿ, ಧರ್ಮಿಯರ ಧಾರ್ಮಿಕ ಸ್ಥಳಗಳಿಗೆ ಭಕ್ತಿಯಿಂದ ಹೋಗುತ್ತಿದ್ದೇನೆ. ಎಲ್ಲಾ ಮಹಾತ್ಮರ ದರ್ಶನ ಪಡೆಯುತ್ತಿದ್ದೇನೆ. ಹೀಗಾಗಿ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ ಸ್ವಾಮಿಯವರೇ ನೀವು ಎಲ್ಲರನ್ನು ಇಂಬಿಟ್ಟುಕೊಂಡು ಹೋಗುತ್ತಿದ್ದೀರಿ. ಮುಂದೆಯೂ ಎಲ್ಲಾ ಜಾತಿ ಜನಾಂಗದ ಸಮಸ್ಯೆಗಳನ್ನು ಆಲಿಸುವ ಭರವಸೆ ನಮಗಿದೆ. ಹೀಗಾಗಿ ನೀವು ಮುನ್ನುಗ್ಗಿ. ನಾವು ನಿಮ್ಮ ಹಿಂದೆ ಇದ್ದೇವೆ ಎಂದು ಭರವಸೆ ನೀಡುತ್ತಿದ್ದಾರೆ. ಜನರ ಪ್ರೀತಿ ವಿಶ್ವಾಸಕ್ಕೆ ನಾನು ಎಂದಿಗೂ ಚಿರಋಣಿ ಎಂದು ರವೀಂದ್ರ ಸ್ವಾಮಿಯವರು ತಿಳಿಸಿದರು.

ನಾನು ವಿವಿಧ ಹಳ್ಳಿಗಳಿಗೆ ಜನಾಶೀರ್ವಾದ ಯಾತ್ರೆಗಾಗಿ ತೆರಳಿದಾಗ ಹಲವು ಕಾರ್ಯಗಳು ಅರ್ಧಂಬರ್ಧ ಮಾಡಲಾಗಿದೆ. ಎಷ್ಟೋ ಹಳ್ಳಿಗಳಲ್ಲಿ ತಾಯಂದಿರು ಇಂದಿಗೂ ಕಿಲೋ ಮೀಟರ್ ದೂರದಿಂದ ನೀರು ತರುತ್ತಾರೆ. ಎಷ್ಟೋ ಮತದಾರ ಪ್ರಭುಗಳು ಬಹಿರ್ದೆಸೆಗೆ ಹೊರಗಡೆ ಹೋಗುತ್ತಾರೆ. ಬಸ್ ಸಂಚಾರವಿಲ್ಲ. ವಿದ್ಯುತ್ ವ್ಯವಸ್ಥೆಯಿಲ್ಲ. ಕುಡಿಯಲು ಶುದ್ಧ ನೀರಿಲ್ಲ. ಇದರಿಂದ ನಮಗೆ ಗೊತ್ತಾಗುತ್ತದೆ ಇಂದಿನ ಶಾಸಕರಲ್ಲಿ ಜನಸೇವೆ ಮಾಡುವ ಕುರಿತು ಇಚ್ಛಾಶಕ್ತಿ ಕಡಿಮೆ ಇದೆ ಎಂದು. ಹೀಗಾಗಿ ನನ್ನ ತಾಲೂಕಿನ ಜನತೆಗೆ ಮೋಸವಾಗಬಾರದು. ಅನ್ಯಾಯವಾಗಬಾರದು ಎಂಬ ಒಂದೇ ಒಂದು ಉದ್ದೇಶದಿಂದ ಕ್ಷೇತ್ರದ ಜನರ ಸೇವೆಗಾಗಿ ನಾನು ರಾಜಕೀಯಕ್ಕೆ ಧುಮುಕಿದ್ದೇನೆ. ಆದ್ದರಿಂದ ನಿಮ್ಮ ಸೇವೆಗಿಂತ ದೊಡ್ಡದು ನನಗೇನೂ ಇಲ್ಲ. ಒಮ್ಮೆ ಆಶೀರ್ವದಿಸಿ ಎಂದು ಪ್ರಾರ್ಥಿಸಿಕೊಂಡರು.

ಇದೇ ವೇಳೆ ವಿವಿಧ ಗ್ರಾಮಗಳ ಪ್ರಮುಖರಾದ ಶಾಲಿವಾನ ಪಾಟೀಲ, ಅನಿಲಕುಮಾರ ಹೊಳಸಮುದ್ರ, ಧನರಾಜ ದಾನಾ, ಶಂಕರರಾವ ಬಚ್ಚನ್, ರಾಜಕುಮಾರ ಹರಿಗುಂಡು, ಯೂಸುಫ್ ಶೇಖ್, ವಿಶ್ವಾಸ್ ಕೋಟೆ, ಪಾಲಗುರು ಪಾಟೀಲ, ಮಹಾದೇವ ಪಾಟೀಲ, ಕರಬಸಯ್ಯ ಸ್ವಾಮಿ, ಸಿದ್ರಾಮ ಬಿರಾದಾರ, ಗಣೇಶ ಪಿಪ್ರೆ, ಮಚೆಂದರ್ ಪಟ್ನೆ, ಮಹಾದೇವ ಖೋಂಡೆ, ಸಂಜೀವಕುಮಾರ ಪಾಟೀಲ, ಶಿವಕುಮಾರ ಶಿರಸಗೆ, ಧನರಾಜ ಟೈಗರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.