ಸ್ವಚ್ಛ ಭಾರತದತ್ತ ನಮೋ ದಿಟ್ಟ ಹೆಜ್ಜೆ-ಬಳ್ಳಾರಿ

ಬ್ಯಾಡಗಿ,ನ.17- ಮಹಾತ್ಮಾ ಗಾಂಧೀಜಿ ಅವರ ಕನಸಿನ ಕೂಸಾಗಿದ್ದ ಸ್ವಚ್ಛ ಭಾರತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಸ್ಥಳೀಯ ತಹಶೀಲ್ದಾರ ಕಚೇರಿಗೆ ಜಿಲ್ಲಾಡಳಿತದಿಂದ ತಾಲೂಕಾ ಮಟ್ಟದ ಕಚೇರಿ ವಿಭಾಗದಲ್ಲಿ ಘೋಷಿತವಾಗಿರುವ “ಜಿಲ್ಲಾ ಮಟ್ಟದ ಸ್ವಚ್ಛತಾ ಗಾಂಧೀ ಪುರಸ್ಕಾರ” ಪ್ರಶಸ್ತಿ ಪತ್ರವನ್ನು ತಹಶೀಲ್ದಾರ ರವಿಕುಮಾರ ಅವರಿಗೆ ವಿತರಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿರುವ ಪ್ರಧಾನಿ ಮೋದಿಯವರು ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಗಾಂಧೀಜಿಯವರ ಪರಿಕಲ್ಪನೆಯ ಸ್ವಚ್ಛ ಭಾರತದ ಕನಸನ್ನೂ ಸಹ ನನಸು ಮಾಡುವತ್ತ ಕ್ರಮ ವಹಿಸಿದ್ದಾರೆ. ಅವರ ಆಶಯದಂತೆ ದೇಶವು ಸ್ವಚ್ಛ ಭಾರತದೊಂದಿಗೆ ರಾಮರಾಜ್ಯವಾಗಬೇಕು ಅಂದಾಗ ಮಾತ್ರ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಕನಸನ್ನು ಈಡೇರಿಸಿದಂತಾಗುತ್ತದೆ ಎಂದು ಹೇಳಿದರು.
ತಹಶೀಲ್ದಾರ ರವಿಕುಮಾರ ಕೊರವರ ಮಾತನಾಡಿ, ತಾಲೂಕಾ ಕಚೇರಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವ ಜೊತೆಗೆ ಜನಸ್ನೇಹಿ ಆಡಳಿತಕ್ಕೂ ಸಹ ತಾವು ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು, ಇದಕ್ಕೆ ಕಚೇರಿಯ ಸಿಬ್ಬಂದಿಯೊಂದಿಗೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಮ್ಮ ಸಹಕಾರ ನೀಡಬೇಕೆಂದು ಕೋರಿದರು.. ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ವಿ.ಎಂ. ಪೂಜಾರ, ಜಿಪಂ ಮಾಜಿ ಅಧ್ಯಕ್ಷ ಎಸ್ ಎನ್. ಮಾತನವರ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸುರೇಶ ಯತ್ನಳ್ಳಿ, ತಾಬಿಜೆಪಿ ಅಧ್ಯಕ್ಷ ಸುರೇಶ ಆಸಾದಿ, ಚುನಾವಣಾ ಶಿರಸ್ತೇದಾರ ಆರ್.ಎಂ. ಮುಗುಳಿ, ಕಂದಾಯ ನಿರೀಕ್ಷಕ ರಾಘವೇಂದ್ರ ಕುಲಕರ್ಣಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು