ಸ್ವಚ್ಛ ಬೀದರ್ ಜಿಲ್ಲೆಗೆ ಕೈಜೋಡಿಸಿ: ಸಚಿವ ಈಶ್ವರ ಖಂಡ್ರೆ

ಬೀದರ್:ಜೂ.30: ಸ್ವಚ್ಛ ಹಾಗೂ ಸುಂದರ ಬೀದರ್ ಜಿಲ್ಲೆ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಬೀದರ್ ಜಿಲ್ಲಾ ಪಂಚಾಯಿತಿ, ಸ್ವಚ್ಛ ಭಾರತ ಮಿಷನ್ ಹಾಗೂ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಸ್ವಚ್ಛ ಭಾರತ ಮಿಷನ್‍ನ ಒಡಿಎಫ್ ಪ್ಲಸ್ ಚಟುವಟಿಕೆ ಅಡಿ ಹೊರ ತರಲಾದ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕೈಪಿಡಿಯನ್ನು ಬೆಂಗಳೂರಿನ ವಿಕಾಸಸೌಧದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಸಾರ್ವಜನಿಕ ಸಭೆ ಹಾಗೂ ತರಬೇತಿ ಕಾರ್ಯಕ್ರಮಗಳ ಮೂಲಕ ಸ್ವಚ್ಛ ಬೀದರ್ ಜಿಲ್ಲೆ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಶಾಂತೀಶ್ವರಿ ಸಂಸ್ಥೆಗೆ ಅಗತ್ಯ ಸಹಕಾರ ಕೊಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಕರಕ್ಯಾಳದಲ್ಲಿ ಕಲುಷಿತ ನೀರು ಹಾಗೂ ನಿಂಬೂರದಲ್ಲಿ ಬಿಸಿಯೂಟ ಸೇವಿಸಿ ಜನ ಅಸ್ವಸ್ಥಗೊಂಡ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಜಿಲ್ಲೆಯನ್ನು ಬಹಿರ್ದೆಸೆ ಮುಕ್ತ ಹಾಗೂ ಸ್ವಚ್ಛ ಜಿಲ್ಲೆಯನ್ನಾಗಿಸಲು ಸಂಕಲ್ಪ ತೊಡಲಾಗಿದೆ. ಈ ದಿಸೆಯಲ್ಲಿ ಶಾಂತೀಶ್ವರಿ ಸಂಸ್ಥೆಯಿಂದ ಈಗಾಗಲೇ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಸ್ವಸಹಾಯ ಗುಂಪುಗಳ ಸದಸ್ಯರು, ಯುವಕ ಸಂಘಗಳ ಸದಸ್ಯರು ಹಾಗೂ ಸರ್ಕಾರಿ ನೌಕರರಿಗೆ ತರಬೇತಿ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮಳೆಗಾಲ ಆರಂಭವಾಗಿರುವ ಕಾರಣ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಕಾರಣ, ಪ್ರತಿಯೊಬ್ಬರೂ ನೈರ್ಮಲ್ಯಕ್ಕೆ ಒತ್ತು ಕೊಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶರಣಯ್ಯ ಮಠಪತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಮಹಾಂತೇಶ ಹಟ್ಟಿ, ಯುವ ಮುಖಂಡರಾದ ಅಭಿಷೇಕ ಮಠಪತಿ, ಹಣ್ಮು ಪಾಜಿ ಮೊದಲಾದವರು ಇದ್ದರು.