ಸ್ವಚ್ಛ ಪರಿಸರದಿಂದ ಆರೋಗ್ಯಕರ ಜೀವನ

ಹುಳಿಯಾರು, ಜು. ೨೦- ಸೊಳ್ಳೆಗಳ ಉತ್ಪತ್ತಿಯನ್ನು ಕಡಿಮೆ ಮಾಡುವ ಮೂಲಕ ಡೆಂಗ್ಯೂ, ಚಿಕೂನ್‌ಗುನ್ಯಾ ಹರಡುವುದನ್ನು ತಪ್ಪಿಸಬಹುದು ಎಂದು ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕ ಅಧಿಕಾರಿ ಸಿ.ವಿ.ವೆಂಕಟರಮಯ್ಯ ಹೇಳಿದರು.
ಹುಳಿಯಾರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಕಾಯಿಲೆಯು ಹರಡುತ್ತಿದ್ದು, ಸಾರ್ವಜನಿಕರು ಸೊಳ್ಳೆಗಳು ವಾಸಿಸುವ ತಾಣವನ್ನು ನಾಶಪಡಿಸಬೇಕು. ಮನೆಯಲ್ಲಿ ನೀರನ್ನು ಸಂಗ್ರಹಿಸುವ ತೊಟ್ಟಿಗಳನ್ನು ಪ್ರತಿ ೩ ದಿನಕ್ಕೊಮ್ಮೆ ಸ್ವಚ್ಛಗೊಳಿಸಿಕೊಳ್ಳಬೇಕು. ಮನೆಯ ಹೊರಗೆ ಚಿಪ್ಪುಗಳು, ಟೈರ್‌ಗಳು ಮತ್ತು ನೀರು ಸಂಗ್ರಹಣೆಯಾಗುವುದನ್ನು ತಡೆದಲ್ಲಿ ಸೊಳ್ಳೆಗಳ ಉತ್ಪತ್ತಿಗೆ ಕಡಿವಾಣ ಹಾಕಿ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ತಡೆಗಟ್ಟಬಹುದು ಎಂದರು.
ಸ್ವಚ್ಛ ಪರಿಸರದಿಂದ ಆರೋಗ್ಯಕರ ಜೀವನ ಎಂಬ ಘೋಷಣೆಯೊಂದಿಗೆ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ರೋಗಗಳನ್ನು ತಡೆಗಟ್ಟಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆ ಭೇಟಿ ನೀಡಿ ಲಾರ್ವಾ ಸರ್ವೆ ನಡೆಸುತ್ತಿದ್ದು, ಅವರಿಗೆ ಸಹಕಾರ ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುನಾಥ್‌ನಾಯ್ಕ, ಮಾಜಿ ಪಂಚಾಯಿತಿ ಸದಸ್ಯ ರಾಘವೇಂದ್ರ, ಗ್ರಾ.ಪಂ. ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.