ಸ್ವಚ್ಛತೆ ಸೇರಿದಂತೆ ವ್ಯವಸ್ಥೆ ಸುಧಾರಣೆಗೆ ಕಟ್ಟುನಿಟ್ಟಿನ ಸೂಚನೆ

ಸಂಜೆವಾಣಿ ವಾರ್ತೆ,
ವಿಜಯಪುರ ಡಿ.23: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶುಕ್ರವಾರ ವಿಜಯಪುರ ನಗರದ ವಿವಿಧೆಡೆ ಮಿಂಚಿನ ಸಂಚಾರ ನಡೆಸಿ, ಸ್ವಚ್ಛತೆ ಹಾಗೂ ವ್ಯವಸ್ಥೆ ಸುಧಾರಣೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಕಣಕಿ ಬಜಾರ್ ಪ್ರದೇಶದಿಂದ ಸಂಚಾರ ಆರಂಭಿಸಿದ ಜಿಲ್ಲಾಧಿಕಾರಿಗಳು, ಕಣಕಿ ಬಜಾರ್ ಪ್ರದೇಶಕ್ಕೆ ಭೇಟಿ ನೀಡಿ, ಕಸ-ಕಂಟಿಗಳನ್ನು ಬೆಳೆದಿರುವ ಕುರಿತು ಗಮನಿಸಿದ ಅವರು, ಕೂಡಲೇ ಮುಳ್ಳು-ಕಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಕಣಕಿ ಬಜಾರ್ ಪ್ರದೇಶಲ್ಲಿ ತಾತ್ಕಾಲಿಕವಾಗಿ ವಾಹನಗಳ ನಿಲುಗಡೆ ವ್ಯವಸ್ಥೆ ಕೈಗೊಳ್ಳಲು ಪರಿಶೀಲನೆ ನಡೆಸಿ ಸೂಕ್ತ ವರದಿ ಸಲ್ಲಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ನಿಲ್ದಾಣದ ಆವರಣ ಸೇರಿದಂತೆ ಒಳಭಾಗವನ್ನು ವೀಕ್ಷಣೆ ಮಾಡಿದ ಅವರು, ಫ್ಲಾಟಫಾರಂಗಳಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿವಿಧೆಡೆಯಿಂದ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಫ್ಲಾಟ್‍ಫಾರಂನಲ್ಲಿಯೇ ಕೂಡಲೇ ಪ್ರತ್ಯೇಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಹ್ಯಾಂಡ್‍ವಾಶ್‍ಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಗಾರ್ಡ್‍ನ್ ವ್ಯವಸ್ಥೆ ಪರಿಶೀಲನೆ ನಡೆಸಿದ ಅವರು, ಸರಿಯಾದ ನಿರ್ವಹಣೆ ಇಲ್ಲದೇ ಗಾರ್ಡನ್‍ನಲ್ಲಿ ಎಲ್ಲೆಂದರಲ್ಲಿ ಕಸಕಡ್ಡಿ ಬೆಳೆದಿರುವುದನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು, ನಿಲ್ದಾಣದಲ್ಲಿರುವ ಗಾರ್ಡನ್‍ನ್ನು ಸ್ವಚ್ಛಗೊಳಿಸಿ ಉತ್ತಮವಾಗಿ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು. ಬಸ್ ನಿಲ್ದಾಣದ ಮಧ್ಯಭಾಗದಲ್ಲಿರುವ ಒಳಚರಂಡಿ ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣದ ಎಲ್ಲ ದಿಕ್ಕಿನಲ್ಲಿ ಶೌಚಾಲಯ ಹೊಂದಿರುವ ಮಾಹಿತಿ ಫಲಕಗಳನ್ನು ಅಳವಡಿಸುವಂತೆ ಅವರು ಸೂಚನೆ ನೀಡಿದರು.
ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಾನಗರ ಪಾಲಿಕೆಯಿಂದ ಹೊಸದಾಗಿ ಇಂದಿರಾ ಕ್ಯಾಂಟಿನ ಹಾಗೂ ಹೈಟೆಕ್ ಶೌಚಾಲಯ ನಿಮಾಣಕ್ಕೆ ಕೆಕೆಆರ್‍ಟಿಸಿಯಿಂದ ಸೂಕ್ತ ಜಾಗ ಪಡೆದು ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ವಿಜಯಪುರ ಗಾಂಧಿವೃತ್ತದಲ್ಲಿರುವ ಹಳೆಯ ನಗರ ಕೇಂದ್ರ ಗ್ರಂಥಾಲಯ ಆವರಣಕ್ಕೆ ಭೇಟಿ ನೀಡಿದ ಅವರು, ಕಂಪೌಂಡ್ ಗೋಡೆ ದುರಸ್ತಿಗೊಳಿಸದೇ ಹೊಸದಾಗಿ ಕಂಪೌಂಡ್ ಗೋಡೆ ನಿರ್ಮಾಣ ಮಾಡಬೇಕು. ಗ್ರಂಥಾಲಯದಲ್ಲಿ ಪೀಠೋಪಕರಣ ಅಳವಡಿಸಲು ಗ್ರಂಥಾಲಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸ್ತ್ರಿ ಮಾರುಕಟ್ಟೆ ಹಾಗೂ ನೆಹರು ಮಾರುಕಟ್ಟೆಗೆ ಭೇಟಿ ನೀಡಿದ ಅವರು, ನೆಹರು ಮಾರುಕಟ್ಟೆ ಒಳಾಂಗಣ ಪ್ರದೇಶದಲ್ಲಿ ವ್ಯಾಪಾರಸ್ಥರು ಈ ಹಿಂದೆ ಗುರುತಿಸಿರುವ ಮಾರುಕಟ್ಟೆ ಸ್ಥಳದಲ್ಲಿ ವ್ಯಾಪಾರ ನಡೆಸಬೇಕು. ತರಕಾರಿ ವ್ಯಾಪಾರಸ್ಥರಿಗೆ ನೆಹರು ಮಾರುಕಟ್ಟೆ ಪಕ್ಕದಲ್ಲಿರುವ ಆವರಣ, ಜನತಾ ಬಜಾರ ಹತ್ತಿರವಿರುವ ಖಾಲಿ ಜಾಗೆಯಲ್ಲಿ ಬೀದಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲು ಪಾಲಿಕೆಯಿಂದ ಪರಿವೀಕ್ಷಣೆ ನಡೆಸಿ ಸವಿಸ್ತಾರವಾದ ವರದಿ ಹಾಗೂ ನಕ್ಷೆಯನ್ನು ಸಲ್ಲಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ಲಾಲಬಹಾದ್ದೂರ ಶಾಸ್ತ್ರೀ ಮಾರುಕಟ್ಟೆಗೆ ಭೇಟಿ ನೀಡಿ ವೀಕ್ಷಣೆ ನಡೆಸಿ, ಮಾರುಕಟ್ಟೆ ಒಳಗಡೆ ದ್ವಾರದಲ್ಲಿ ಅಳವಡಿಸಿದ ಗ್ರಿಲ್‍ಗಳನ್ನು ದುರಸ್ತಿಗೊಳಿಸುವಂತೆ ತಿಳಿಸಿದ ಅವರು, ನಂತರ ನಗರದ ವಾಜಪೇಯಿ ರಸ್ತೆ, ಕಿರಾಣಾ ಮಾರುಕಟ್ಟೆ, ಕಾಬ್ರಾಜಿ ಬಜಾರ, ಸರಾಫ್ ಬಜಾರ, ಸಿದ್ದೇಶ್ವರ ರಸ್ತೆ, ಲಿಂಗದಗುಡಿ ರಸ್ತೆ, ಎಪಿಎಂಸಿ ರಸ್ತೆ, ಎಲ್ಲ ಮಾರ್ಗಗಳಲ್ಲಿ ಸಂಚರಿಸಿದ ಅವರು, ದ್ವಿಚಕ್ರ ಹಾಗೂ ನಾಲ್ಕುಚಕ್ರ ವಾಹನ ನಿಲುಗಡೆ ಮತ್ತು ಬೀದಿ ವ್ಯಾಪಾರಸ್ಥರಿಗೆ ಸೂಕ್ತ ಜಾಗವನ್ನು ಗುರುತಿಸಿ ಅನುಕೂಲ ಕಲ್ಪಿಸಿಕೊಡಬೇಕು. ಈ ಪ್ರದೇಶದಲ್ಲಿನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಪಾಲಿಕೆ ಆರೋಗ್ಯ ಮೇಲ್ವಿಚಾರಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಂತರ ಚಾಬುಕಸವಾರ ದರ್ಗಾ ಹತ್ತಿರುವಿರುವ ಖಾಸಗಿ ಜಮೀನಿನಲ್ಲಿರುವ ಪುರಾತನ ಕಾಲದ ತೆರೆದ ಬಾವಿಯನ್ನು ವೀಕ್ಷಿಸಿದ ಅವರು, ಪುರಾತನ ಕಾಲದ ತೆರೆದ ಬಾವಿ ಪುನಶ್ಚೇತನ ಕುರಿತು ಸೂಕ್ತ ಕ್ರೀಯಾಯೋಜನೆ ಸಿದ್ಧಪಡಿಸುವಂತೆ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೂಚಿಸಿದ ಅವರು, ಶಾಂತಿನಿಕೇತನ ಕಾಲೇಜ್ ಮುಂಭಾಗದಲ್ಲಿರುವ ಮಹಾನಗರ ಪಾಲಿಕೆ ವ್ಯಾಪ್ತಿಯ ಒಂದು ಎಕರೆ ವಿಸ್ತೀರ್ಣದಲ್ಲಿರುವ ತೆರೆದ ಪುರಾತನ ಭಾವಿಯನ್ನು ಪರಿಶೀಲನೆ ನಡೆಸಿದ ಅವರು, ಈ ಕುರಿತು ಸಹ ದಾಖಲೆಗಳನ್ನು ಸಂಗ್ರಹಿಸಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಇಂಡಿ ರಸ್ತೆಯಲ್ಲಿರುವ ಪಾಲಿಕೆಯ ಒಳಚರಂಡಿ ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದÀ ಅವರು, ಕಾಮಗಾರಿಯನ್ನು ಪೂರ್ಣಗೊಳಿಸಿ ವೈಜ್ಞಾನಿಕವಾಗಿ ಶುದ್ಧೀಕರಣ ಮಾಡುವ ಬಗ್ಗೆ ಕೂಡಲೇ ಕ್ರೀಯಾಯೋಜನೆ ಸಿದ್ಧಪಡಿಸಲು ಮಹಾನಗರ ಪಾಲಿಕೆಯ ಅಧೀಕ್ಷಕ ಅಭಿಯಂತರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಬದ್ರೂದ್ದಿನ ಸೌದಾಗಾರ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಪಾಲಿಕೆ ಅಧೀಕ್ಷಕ ಅಭಿಯಂತರ ವಿ.ಎಂ. ಹಿರೇಮಠ, ಪಾಲಿಕೆಯ ನಿರೀಕ್ಷಕರು, ಮೇಲ್ವಿಚಾರಕು, ನಗರಾಭಿವೃದ್ದಿ ಪ್ರಾಧಿಕಾರದ ಅಭಿಯಂತರರು ಉಪಸ್ಥಿತರಿದ್ದರು.