ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿ: ಸ್ವಾಮೀಜಿ

ಅರಸೀಕೆರೆ, ನ. ೫- ಪ್ರಾಕೃತಿಕ ಸಂಪತ್ತನ್ನು ನಾವು ಸದ್ಬಳಕೆ ಮಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದೇವೆ. ಜನತೆಗೆ ಪರಿಸರ ಸ್ವಚ್ಛತೆ ಹಾಗೂ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬ ಪ್ರಜೆಗೂ ಮನೆಗೆ ಒಂದು ಸಸಿ ನೆಟ್ಟು ಬೆಳೆಸಿದರೆ ಊರಿಗೊಂದು ಸುಂದರ ಉದ್ಯಾನ ನಿರ್ಮಾಣ ಮಾಡಬಹುದು ಎಂದು ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸುಕ್ಷೇತ್ರ ಚಂದಾಪುರ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಬಿಜೆಪಿ ಘಟಕದ ವತಿಯಿಂದ ಏರ್ಪಡಿಸಿದ್ದ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ದೇಶದ ನೈಸರ್ಗಿಕ ಸಂಪತ್ತನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮರ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಜಿ. ಮರಿಸ್ವಾಮಿ ಮಾತನಾಡಿ, ಮನುಷ್ಯನ ದುರಾಸೆಯಿಂದ ಪ್ರಕೃತಿಯಲ್ಲಿನ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಪರಿಣಾಮ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಅತಿವೃಷ್ಟಿ-ಅನಾವೃಷ್ಟಿ ಆಗುತ್ತಿದೆ. ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆಗೆ ಪ್ರೇರಣೆ ನೀಡಬೇಕು ಎಂದರು.
ಗ್ರಾಮಾಂತರ ಬಿಜೆಪಿ ಘಟಕದ ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಉತ್ತಮ ಗಾಳಿ ಬೇಕಾದಲ್ಲಿ ಮನುಷ್ಯ ಅನಿರ್ವಾಯವಾಗಿ ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳಸಬೇಕಾಗಿದೆ. ಅಂತೆಯೇ ಸಾರ್ವಜನಿಕರಲ್ಲಿ ಕೋವಿಡ್-೧೯ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಘಟಕದ ಅಧ್ಯಕ್ಷ ಪುರುಷೋತ್ತಮ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಅವಿನಾಶ್‌ನಾಯ್ಡು, ಲಾಳನಕೆರೆ ಯೋಗೇಶ್, ಲೋಕೇಶ್, ಹೊಳೆಯಪ್ಪ, ಮಂಜುನಾಥ್, ವಿನೋದ್‌ಕುಟ್ಟಿ, ಸಿದ್ದೇಶ್, ಕೆಂಪು, ಸಾಗರ ಶಿವರಾಜ್, ಚಂದ್ರಶೇಖರ್, ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.