ಸ್ವಚ್ಛತೆ ಬಗ್ಗೆ ಜಾಗೃತಿ ಅಗತ್ಯ :ಜಿಲ್ಲಾಧಿಕಾರಿ

ಗದಗ,ಮಾ2 : ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಗಟ್ಟುವಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಅವರು ಚಿಕುನ್ ಗುನ್ಯಾ, ಡೆಂಗ್ಯೂ ರೋಗಗಳ ತಡೆಗಟ್ಟುವಿಕೆಗೆ ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸಬೇಕು. ಮನೆ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳಲು ಹಾಗೂ ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳುವ ಕುರಿತು ಆರೋಗ್ಯ ಇಲಾಖಾಧಿಕಾರಿಗಳು ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ. ಗೊಜನೂರ ಮಾತನಾಡಿ, ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನವು ಗ್ರಾಮೀಣ ಪ್ರದೇಶದಲ್ಲಿನ ಎಲ್ಲ ಸ್ತರದ ಜನರಿಗೆ ಆರೋಗ್ಯ ಒದಗಿಸುವ ಉದ್ದೇಶ ಹೊಂದಿದೆ. ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸುವುದು, ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಕಾಪಾಡುವುದು, ಮಕ್ಕಳ ಆರೋಗ್ಯ ರಕ್ಷಣೆಗಾಗಿ ಸಾಂಕ್ರಾಮಿಕ ರೋಗಗಳಿಂದ ಅವರನ್ನು ರಕ್ಷಿಸುವುದು, ಲಸಿಕೆ ಹಾಕಿಸುವುದು. ಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು, ಲಿಂಗ ತಾರತಮ್ಯ ಹೋಗಲಾಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಆರ್.ಸಿ.ಎಚ್.ಕಾರ್ಯಕ್ರಮ : (ಸಂತಾನೋತ್ಪತ್ತಿ ಮಕ್ಕಳ ಆರೋಗ್ಯ ಕಾರ್ಯಕ್ರಮ) ಜಿಲ್ಲೆಯಲ್ಲಿ ಎಪ್ರಿಲ್ 2020 ರಿಂದ ಫೆ. 2021 ರವರೆಗೆ ಒಟ್ಟಾರೆ ಖಾಸಗಿ ಆಸ್ಪತ್ರೆಗಳಲ್ಲಿ 3975 ಹಾಗೂ ಸರ್ಕಾರಿ ಆಸ್ಪತ್ರಗಳಲ್ಲಿ 10208 ಹೆರಿಗೆ ಪ್ರಕರಣಗಳಾಗಿದ್ದು ಆ ಪೈಕಿ 148 ಶಿಶು ಮರಣಗಳಾಗಿವೆ ಹಾಗೂ 14 ತಾಯಂದಿರ ಮರಣಗಳಾಗಿವೆ.

ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ಯೋಜನೆ : ಆರ್.ಬಿ.ಎಸ್.ಕೆ. (ರಾಷ್ಟ್ರೀಯ ಬಾಲ ಸ್ವಾಸ್ಥ ಕಾರ್ಯಕ್ರಮ) : ಎಲ್ಲ 18 ವರ್ಷದೊಳಗಿನ ಮಕ್ಕಳಿಗೆ ರೋಗಗಳಿಂದ, ಅಶಕ್ತತೆಯಿಂದ, ಪ್ರಗತಿಯಲ್ಲಿ ವಿಳಂಬವಿರುವ ಮಕ್ಕಳಿಗೆ ಆರೋಗ್ಯ ರಕ್ಷಣೆ ನೀಡುವುದು ಕಾರ್ಯಕ್ರಮದ ಉದ್ದೇಶ. ಈ ಯೋಜನೆಯಡಿ ಒಟ್ಟು ಅಂಗನವಾಡಿ ಕೇಂದ್ರಗಲ್ಲಿನ 78151 ಮಕ್ಕಳ ನೋಂದಣಿಯಾಗಿದೆ. ಜಿಲ್ಲೆಯಲ್ಲಿ ಫೆಬ್ರುವರಿ 2021 ರ ಮಾಹೆಯಲ್ಲಿ ಐಟಿಸಿಟಿ ಕೇಂದ್ರಗಳಲ್ಲಿ 2816 ಜನರನ್ನು ಪರೀಕ್ಷಿಸಲಾಗಿ ಆ ಪೈಕಿ 9 ಜನರಿಗೆ ಎಚ್.ಐ.ವಿ ಸೋಂಕು ದೃಢಪಟ್ಟಿದೆ ಎಂದು ಆರ್.ಸಿ.ಎಚ್. ಅಧಿಕಾರಿಗಳು ಸಭೆಗೆ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ತಾಲೂಕಾ ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.