ಸ್ವಚ್ಛತೆ ಕಾಪಾಡದಿದ್ದರೆ ಅಂಗಡಿಗಳ ಪರವಾನಗಿ ರದ್ದು


* ಜಿಪಂನ ಡಿ.ಎಸ್. ಭೀಮಪ್ಪ ಲಾಳಿ ಹೇಳಿಕೆ
* ಸ್ವಚ್ಛ ಶನಿವಾರ ಪ್ರಯುಕ್ತ ಸ್ವತಃ ತಾವೇ ಕಸಗೂಡಿಸಿ ಅರಿವು ಮೂಡಿಸಿದ ಉಪ ಕಾರ್ಯದರ್ಶಿ
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಸೆ.03:  ಸಾರ್ವಜನಿಕ ಸ್ಥಳಗಳಲ್ಲಿ ಇರುವ ಅಂಗಡಿ ಮುಗ್ಗಟ್ಟುಗಳ ಮಾಲೀಕರು ಸ್ವಚ್ಛತೆ ಕಾಪಾಡದಿದ್ದರೆ ಗ್ರಾಪಂನವರು ಅಂತವರಿಗೆ ನೋಟಿಸ್ ನೀಡಬೇಕು, ಒಂದು ವೇಳೆ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ತೋರಿದರೆ, ಅವರ ಅಂಗಡಿಯ ಪರವಾನಗಿ ರದ್ದು ಮಾಡಿ ಎಂದು ಬೆಣ್ಣಿಹಳ್ಳಿ ಗ್ರಾಪಂ ಪಿಡಿಒಗೆ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಅವರು ಸೂಚಿಸಿದರು.
ತಾಲೂಕಿನ ಬೆಣ್ಣಿಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬೆಣ್ಣಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಂಭಾಗದ ಕೊಟ್ಟೂರು-ಹರಪನಹಳ್ಳಿ ರಸ್ತೆ ಸಮೀಪ ಸ್ವಚ್ಛ ಶನಿವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮದಲ್ಲಿರುವ ಅಂಗಡಿಮುಗ್ಗಟ್ಟುಗಳ ಮಾಲೀಕರು ಕಡ್ಡಾಯವಾಗಿ ಕಸದ ಡಬ್ಬಿಯನ್ನು ಇಡಬೇಕು. ನಿತ್ಯ ಉತ್ಪತ್ತಿಯಾಗುವ ಕಸದ ತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಛತಾ ವಾಹಿನಿಗೆ ನೀಡಬೇಕು. ಇದರ ಜತೆಗೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ ಎಂದ ಅವರು ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ನಿತ್ಯ ಗಮನಹರಿಸಬೇಕು. ಪ್ರತಿ ಮನೆಯಿಂದ ಒಣ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಸ್ವಚ್ಛತಾ ವಾಹಿನಿಗೆ ನೀಡಬೇಕು. ಈ ಬಗ್ಗೆ ಯಾರೂ ನಿರ್ಲಕ್ಷ್ಯ ತೋರಬಾರದು ಎಂದರು.
ಇನ್ನು ಗ್ರಾಪಂ ಕಚೇರಿಗೆ ಭೇಟಿದ ಉಪ ಕಾರ್ಯದರ್ಶಿಗಳು, ಘನತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ಪ್ರಾರಂಭಿಸಲು ಸ್ಥಳದ ದಾಖಲೆಗಳನ್ನು ಪಡೆದುಕೊಂಡು ಕೆಲಸ ಆರಂಭಿಸಬೇಕು. ಕುಡಿಯುವ ನೀರಿನ ಮೇಲ್ತೊಟ್ಟಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿರಬೇಕು. ಇದರ ಜತೆಗೆ ನೀರಿನ ಮಾದರಿಯನ್ನು ನೀಡಿ ಕುಡಿಯಲು ಯೋಗ್ಯವೇ ಎಂದು ಆಗಾಗ ಪರೀಕ್ಷೆಗೊಳಪಡಿಸುತ್ತಿರಬೇಕು ಎಂದು ತಿಳಿಸಿದರು.
ನಂತರ ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಕಡತಗಳನ್ನು ಪರಿಶೀಲನೆ ಮಾಡಿದ ಅವರು, ಎಲ್ಲ ಕಡತಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗಿದೆ. ಸಣ್ಣಪುಟ್ಟ ದಾಖಲೆ ಇಲ್ಲ. ತ್ವರಿತವಾಗಿ ಅವುಗಳನ್ನು ಕಡತಗಳಿಗೆ ಸೇರಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ್, ತಾಲೂಕು ನರೇಗಾ ಸಹಾಯಕ ನಿರ್ದೇಶಕರಾದ ಯು.ಎಚ್.ಸೋಮಶೇಖರ್, ಗ್ರಾಪಂ ಪಿಡಿಒ ಸಿ.ಹುಲಿಗೆಮ್ಮ, ಅಧ್ಯಕ್ಷ ಟುಕೇಶಪ್ಪ, ಗ್ರಾಪಂ ಸದಸ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಸದಸ್ಯರ ಸೇರಿ ಇತರರು ಇದ್ದರು.