ಅರಕೇರಾ,ಜೂ.೨೪-
ಉತ್ತಮ ಆರೋಗ್ಯಕ್ಕಾಗಿ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ನೋಡಿಕೊಳ್ಳಬೇಕು ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುನಾಥ ಹೇಳಿದರು.
ಪಟ್ಟಣದ ಶ್ರೀ ಸಿದ್ದಯ್ಯ ಹವಲ್ದಾರ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಇಲಾಖೆಯಿಂದ ಏರ್ಪಡಿಸಿದ್ದ ಮಲೇರಿಯಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚು ಪತ್ತೆಯಾಗುತ್ತವೆ. ಅನಾಫಿಲಿಸ್ ಸೊಳ್ಳೆಗಳ ಉತ್ಪತ್ತಿಯಿಂದ ಮಲೇರಿಯಾ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಮುದಾಯದ ಸಹಕಾರ ಅಗತ್ಯ. ಸುತ್ತಲಿನ ಪರಿಸರ ಮತ್ತು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಕಾಳಜಿ ವಹಿಸಬೇಕು. ನೀರು ನಿಲ್ಲದಂತೆ ತಡೆಯುವುದು ಮತ್ತು ಸೊಳ್ಳೆ ಉತ್ಪತ್ತಿ ತಾಣಗಳಲ್ಲಿ ಕೀಟ ನಾಶಕಗಳನ್ನು ಸಿಂಪಡಿಸಬೇಕು ಎಂದು ತಿಳಿಸಿದರು.
ಎನ್‌ವಿಡಿಸಿಪಿ ತಾಲೂಕು ಸಂಯೋಜಕ ಓಂಕಾರ್, ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಿಕಾರ್ಜುನ, ಉಪನ್ಯಾಸಕರಾದ ಮಂಜುನಾಥ, ತಿಪ್ಪಣ್ಣ, ವಿದ್ಯಾವತಿ, ಶಶಿಕಲಾ ಇತರರಿದ್ದರು.