ಅಥಣಿ :ಅ.3: ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯನ್ನ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಆರೋಗ್ಯವಂತ ಜೀವನಕ್ಕಾಗಿ ಪ್ರತಿಯೊಬ್ಬರಲ್ಲಿ ಸ್ವಚ್ಛತೆ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸುವುದು ಅಗತ್ಯವಾಗಿದೆ ಎಂದು ಅಥಣಿ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯ ಅಧೀಕ್ಷಕ ಶ್ರೀರಂಗ ಜೋಶಿ ಹೇಳಿದರು.
ಅವರು ಅಥಣಿ ಪಟ್ಟಣದ ಹೊರವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಇಲಾಖೆಯ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ( ಪ್ರವೀಣ್ ಶೆಟ್ಟಿ ಬಣ ) ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಮ್ಮಿಕೊಂಡಿದ್ದ ಸ್ವಚ್ಛತೆಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಪ್ರತಿಯೊಬ್ಬರಲ್ಲಿ ಈ ಸಾಮಾಜಿಕ ಪ್ರಜ್ಞೆ ಇರಬೇಕು. ದೇಶದಲ್ಲಿ ಸ್ವಚ್ಛತೆ ಹಾಗೂ ಆರೋಗ್ಯ ಇರಬೇಕು ಎಂಬುದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಸ್ವಚ್ಛ ಭಾರತ ಅಭಿಯಾನ ಇಂದು ದೇಶದೆಲ್ಲಡೆ ಸಂಚಲನ ಮೂಡಿಸುತ್ತಿದೆ. ಆದರೆ ಇದು ಒಂದೆರಡು ದಿನಕ್ಕೆ ಸೀಮಿತವಾಗದೆ ಸ್ವಚ್ಛತೆ ಎಂಬುದು ನಮ್ಮ ಜೀವನದ ಒಂದು ಭಾಗವಾಗಬೇಕು. ಪ್ರತಿಯೊಬ್ಬರೂ ಸ್ವಚ್ಛತೆಯನ್ನ ಕಾಪಾಡುವುದರ ಜೊತೆಗೆ ಇನ್ನೊಬ್ಬರಲ್ಲಿ ಸ್ವಚ್ಛತೆಯ ಪ್ರಜ್ಞೆಯನ್ನು ಮೂಡಿಸಬೇಕೆಂದು. ಕರವೇ ಕಾರ್ಯಕರ್ತರಿಗೆ ಕರೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಘಟಕದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಸವಿಸಿದ ಮಹಾತ್ಮ ಗಾಂಧೀಜಿಯವರು ತಮ್ಮ ಬದುಕಿನಲ್ಲಿ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಒತ್ತು ನೀಡಿದ್ದರು. ಪ್ರತಿಯೊಬ್ಬರೂ ಸ್ವಚ್ಛತೆ ಹಾಗೂ ಆರೋಗ್ಯವಂತ ಸಮಾಜವನ್ನು ಕಟ್ಟಲು ಕೈಜೋಡಿಸಬೇಕು. ಕರವೇ ಸಂಘಟನೆ ನಾಡು ನುಡಿ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾದಾಗ ಹೋರಾಟ ಮಾಡುವುದರ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು.
ಕರವೇ ಜಿಲ್ಲಾ ಸಂಚಾಲಕ ಜಗನ್ನಾಥ ಭಾಮನೆ, ಉಪಾಧ್ಯಕ್ಷ ಸಿದ್ದು ಹಂಡಗಿ, ಉದಯ ಮಾಕಾಣಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜು ವಾಘಮೋರೆ, ಅನಿಲ ಪಾಟೀಲ, ಸಿದ್ದು ಮಾಳಿ, ಅಶೋಕ ಗೌರಗೊಂಡ, ಸುಕುಮಾರ ಮಾದರ, ಗುಂಡು ಕೋರಿ, ಮುತ್ತಣ್ಣ ಗೊಲ್ಲರ, ಮುರುಗೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.