ಸ್ವಚ್ಛತೆಗೆ ಆದ್ಯತೆ ನೀಡಿ., ಜಾಗೃತರಾಗಿರಿ.. ಕೊರೋನಾ ಮುಕ್ತರಾಗಿರಿ..!!

ಕಂಪ್ಲಿ ಜೂ 01 : ಪಟ್ಟಣದ ಕೊಟ್ಟಾಲ್ ರಸ್ತೆ ಮಾರ್ಗದಲ್ಲಿರುವ ಹಕ್ಕಿಪಿಕ್ಕಿ ಬಡಾವಣೆ ಪ್ರದೇಶದ 40 ಕುಟುಂಬಗಳಿಗೆ ಅಜೀಂ ಪ್ರೇಮ್‍ಜಿ ಫೌಂಡೇಶನ್ ವತಿಯಿಂದ ತಾಲೂಕಾಡಳಿತಕ್ಕೆ ನೀಡಲಾಗಿದ್ದ ಪಡಿತರ ಕಿಟ್‍ಗಳನ್ನು ಮಂಗಳವಾರ ತಹಸೀಲ್ದಾರ್ ಗೌಸಿಯಾಬೇಗಂ ಹಕ್ಕಿಪಿಕ್ಕಿ ಕುಟುಂಬಗಳಿಗೆ ವಿತರಿಸಿದರು.
ಬಳಿಕ ತಹಸೀಲ್ದಾರ್ ಗೌಸಿಯಾಬೇಗಂ ಮಾತನಾಡಿ, ಹಕ್ಕಿಪಿಕ್ಕಿ ಬಡಾವಣೆಯ ಜನರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಎಲ್ಲಿ ಸ್ವಚ್ಛತೆ ಹಾಗು ನೈರ್ಮಲ್ಯವಿರುತ್ತದೋ ಆ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಪ್ರಮಾಣ ಕಡಿಮೆ ಇರುತ್ತದೆ. ಇನ್ನು ನಿಮ್ಮ ಬಡಾವಣೆಯ ಮಕ್ಕಳ ಬಗ್ಗೆ ಹೆಚ್ಚಿನ ಮಟ್ಟದ ಮುತುವರ್ಜಿ ವಹಿಸುವುದು ಅತ್ಯಗತ್ಯ. ಯಾಕೆಂದರೆ, ಕೊರೊನಾ ಮೂರನೇ ಅಲೆಯ ನಿಯಂತ್ರಣಕ್ಕಾಗಿ ಈಗಾಗಲೇ ಜಿಲ್ಲಾಧಿಕಾರಿಗಳು ಜಿಲ್ಲಾ ವ್ಯಾಪ್ತಿಯ ಎಲ್ಲಾ ತಾಲೂಕುಗಳಲ್ಲಿ ಮಕ್ಕಳ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ ಹಾಗು ಮಕ್ಕಳಲ್ಲಿ ಅಪೌಷ್ಠಿಕತೆ ಸಮಸ್ಯೆ ತಲೆದೋರದಂತೆ ಪಾಲನೆ ಪೋಷಣೆ ಮಾಡಬೇಕು ಎಂದು ಹಕ್ಕಿಪಿಕ್ಕಿ ಕಾಲೋನಿ ನಿವಾಸಿಗಳಿಗೆ ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಗ್ರಾಮ‌ಲೆಕ್ಕಾಧಿಕಾರಿಗಳಾದ ವಿಜಯ್ ಕುಮಾರ್, ಗಿರೀಶ್ ಬಾಬು, ಕಂದಾಯ ನಿರೀಕ್ಷಕ ಎಸ್.ಗಣೇಶ್, ಹಕ್ಕಿಪಿಕ್ಕಿ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಎಚ್.ಪಿ.ಶ್ರೀಕಾಂತ್, ಅಲೆಮಾರಿ‌,ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಎಚ್.ಪಿ.ಶಿಕಾರಿ ರಾಮು, ಹಕ್ಕಿಪಿಕ್ಕಿ ಜನಾಂಗದ ಮುಖಂಡರಾದ ಪೂಜಾರಿ ಶಂಕರ್, ಮೋಹನ್,ಜಾನಕಿ,ಮಂಜುಳಾ ಸೇರಿದಂತೆ ಅನೇಕರಿದ್ದರು.