“ಸ್ವಚ್ಛತಾ ಹಿ ಸೇವಾ ಅಂದೋಲನ” ಕಾರ್ಯಕ್ರಮ

ಬ್ಯಾಡಗಿ,ಸೆ.23: ಸ್ವಚ್ಛ ಭಾರತ ಕಾರ್ಯಕ್ರಮದ ಉದ್ದೇಶವು ಜನರಲ್ಲಿ ಜಾಗೃತಿ ಮೂಡಿಸಿ ಒಗ್ಗೂಡಿಸುವುದು ಮತ್ತು ತ್ಯಾಜ್ಯವನ್ನು ಸ್ವಚ್ಛಗೊಳಿಸುವಲ್ಲಿ ಮುಖ್ಯವಾಗಿ ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ತೆಗೆಯುವುದರಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ವತಿಯಿಂದ ಸ್ವಚ್ಛಭಾರತ್ ಮಿಷನ್ ಯೋಜನೆಯಡಿಯಲ್ಲಿ “ಸ್ವಚ್ಛತಾ ಹಿ ಸೇವಾ ಅಂದೋಲನ” ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಚ್ಛತೆಯು ಸಂಸ್ಕೃತಿಯ ಭಾಗವಾಗಿದ್ದು, ಅದು ನಮ್ಮ ಜೀವನದ ಅಂಶವಾಗಬೇಕು. ಸ್ವಚ್ಛತೆಯು ಸಫಲವಾಗಬೇಕಾದರೆ ಮುಖ್ಯವಾಗಿ ಮೊದಲು ನಮ್ಮೆಲ್ಲರ ಮನಸ್ಸಿನಲ್ಲಿ ಬದಲಾವಣೆಯಾಗಬೇಕು ಪರಿಸರವನ್ನು ಸ್ವಚ್ಛವಾಗಿಡುವುದೇ ನಮ್ಮ ದೇಶಕ್ಕೆ ನೀಡುವ ಕೊಡುಗೆಯಾಗಿದೆ ನಮ್ಮ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ನಮ್ಮ ಹೊಣೆಯಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ನಾಲ್ಕು ಮಹಿಳಾ ಸ್ವಸಹಾಯ ಸಂಘಗಳಿಗೆ ರಾಜ್ಯ ಸರ್ಕಾರದ ಸಂಜೀವಿನಿ ಯೋಜನೆಯಡಿ ತಲಾ 1.50ಲಕ್ಷ ರೂಗಳಂತೆ 6ಲಕ್ಷ ರೂಗಳ ಚೆಕ್ಕುಗಳನ್ನು ವಿತರಿಸಲಾಯಿತು. ಅಲ್ಲದೇ, ಸ್ವಚ್ಛ ಭಾರತ ಅಭಿಯಾನ ಕುರಿತು ಗ್ರಾಮದಲ್ಲಿ ಸಾರ್ವಜನಿಕವಾಗಿ ಜಾಥಾ ನಡೆಸಿ ಜಾಗೃತಿ ಮೂಡಿಸಲಾಯಿತು.
ಎನ್.ಆರ್.ಎಲ್.ಎಂ ಸಂಯೋಜಕ ಹನುಮಂತಪ್ಪ ಅಗಸಿಬಾಗಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಸಹದೇವಪ್ಪ ಬನ್ನಿಹಳ್ಳಿ ವಹಿಸಿದ್ದರು. ಸದಸ್ಯರಾದ ವೀರಪ್ಪ ಅಗಸಿಬಾಗಿಲ, ಶಿವಪ್ಪ ಕದರಮಂಡಲಗಿ, ಮಂಜಪ್ಪ ಮರಿಯಮ್ಮನವರ, ಅಕ್ಕಮ್ಮ ಲಿಂಗದಳ್ಳಿ, ಅಕ್ಕಮ್ಮ ಶಿಡೇನೂರ, ಮಂಗಳ ಕಮತರ ಹನುಮಂತಪ್ಪ ಹೊನ್ನಪ್ಪನವರ, ಪಿಡಿಓ ಜಗದೀಶ ಮಣ್ಣಮ್ಮನವರ, ಗುಡ್ಡಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ವತಿಯಿಂದ ಬ್ಯಾಡಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬಂದಿರುವ ಕೆಎಎಸ್ ಶ್ರೇಣಿಯ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.