ಸ್ವಚ್ಛತಾ ಪಕವಾಡ ಕಾರ್ಯಕ್ರಮ ಮುಕ್ತಾಯ ಸಮಾರಂಭ

ಕಲಬುರಗಿ,ಆ.1-ಕೌಶಲ್ಯ ಅಭಿವೃಧ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಾಯೋಜಿತ ಸಂಸ್ಥೆಯಾದ ಜನ ಶಿಕ್ಷಣ ಸಂಸ್ಥಾನ ಜಿಲ್ಲೆಯಾದ್ಯಂತ ಸತತವಾಗಿ 15 ದಿನ (ಜು.16ರಿಂದ 31 ರವರೆಗೆ) ಸ್ವಚ್ಛತಾ ಪಕವಾಡ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿತ್ತು. ಅದರಂತೆ ಜು.31 ಜನ ಶಿಕ್ಷಣ ಸಂಸ್ಥಾನದ ಕಛೇರಿಯಲ್ಲಿ ಸೌಂದರ್ಯ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಭಾಗ್ಯಲಕ್ಷ್ಮೀ ಮೋಳಗಿ ಅವರು ಇಂದಿನ ದಿನಗಳಲ್ಲಿ ಶಿಕ್ಷಣದ ಜೊತೆ ಜೊತೆಗೆ ಕೌಶಲ್ಯವೂ ಕೂಡ ಒಂದು ಅವಿಭಾಜ್ಯ ಅಂಗ ಈ ನಿಟ್ಟಿನಲ್ಲಿ ಜನ ಶಿಕ್ಷಣ ಸಂಸ್ಥಾನ ಯಶಸ್ಸಿನತ್ತ ಸಾಗುತ್ತಿದೆ. ಹಾಗೆಯೇ ನೀವೆಲ್ಲರೂ ಕೇವಲ ಕೌಶಲ್ಯ ತರಬೇತಿ ತೆಗೆದುಕೊಂಡರೇ ಸಾಲದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಸಾತಯ್ಯ ಹಿರೇಮಠ ಅವರು ಮಾತನಾಡುತ್ತ, ಕೌಶಲ್ಯ ತರಬೇತಿ ತೆಗೆದುಕೊಂಡು ಸ್ವಯಂ ಉದ್ಯೋಗ ಪ್ರಾರಂಭ ಮಾಡುವವರಿಗೆ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಮತ್ತು ತಯಾರಿಸಿದ ವಸ್ತುಗಳನ್ನು ಆನ್‍ಲೈನ್ ನಲ್ಲಿಯೇ ಮಾರಾಟ ಮಾಡುವ ವ್ಯವಸ್ಥೆ ಕೂಡ ಮಾಡಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕರಾದ ಸುರೇಂದ್ರ ಪೋಲಿಸ್ ಪಾಟೀಲ ಅವರು ಮಾತನಾಡುತ್ತ, ಕಲಿಕಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಉದ್ದೇಶದಿಂದ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಲ್ಲಿ ನಾವು ಬಹುತೇಕ ಯಶಸ್ವಿಯಾಗುವತ್ತ ಸಾಗುತ್ತಿದ್ದೇವೆ. ನಮಗೆ ನಮ್ಮ ಮನೆಯವರ ಬೆಂಬಲ ಎಷ್ಟು ಮುಖ್ಯವೋ ನಮ್ಮ ಆತ್ಮವಿಶ್ವಾಸ ಕೂಡ ಅಷ್ಟೇ ಮುಖ್ಯ ಎಂದು ಕರೆ ನೀಡಿದರು.
ಕಲಿಕಾರ್ಥಿಗಳು ಸೌಂದರ್ಯ ಸ್ಪರ್ಧೆಯಲ್ಲಿ ಅತ್ಯಂತ ಉತ್ಸುಕರಾಗಿ ಭಾಗವಹಿಸಿದ್ದರು, ಅದರಲ್ಲಿ ವಿಜೇತರಾದ 3 ಕಲಿಕಾರ್ಥಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಯಿತು ಅದರ ಜೊತೆಗೆ ಜು.19 ರಂದು ವಿದ್ಯಾನಗರದಲ್ಲಿ ನಡೆದ ಪ್ರಬಂಧ ಸ್ಪಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೂ ಕೂಡ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮೌನೇಶ ಪೊದ್ದಾರ, ಬಸವರಾಜ ಧಾಬಾ, ಸಿದ್ದಣಗೌಡ ಬಿರಾದಾರ, ಜ್ಯೋತಿ ಬೆಲ್ಸೂರೆ ಹಾಗೂ ಇತರರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪಾರ್ವತಿ ಹಿರೇಮಠ ನಿರೂಪಿಸಿ ವಂದಿಸಿದರು.