ಸ್ವಚ್ಛತಾ ಕಾರ್ಮಿಕರು ವೈಯಕ್ತಿಕ ಸ್ವಚ್ಛತೆಯೊಂದಿಗೆ ಪೌಷ್ಠಿಕ ಆಹಾರ ಸೇವನೆ ಕಡೆ ಗಮನಹರಿಸಿ

ಚಿತ್ರದುರ್ಗ.ಜೂ.೧೩: ಸ್ವಚ್ಛತಾ ಕಾರ್ಮಿಕರು ತಮ್ಮ ವೈಯಕ್ತಿಕ ಸ್ವಚ್ಛತೆಯೊಂದಿಗೆ ಪೌಷ್ಠಿಕ ಆಹಾರ ಸೇವನೆ ಕಡೆ ಗಮಹರಿಸಬೇಕು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಎನ್.ಎಸ್.ಮಂಜುನಾಥ್ ಸಲಹೆ ನೀಡಿದರು.ಇಲ್ಲಿನ ಮಾರುತಿ ನಗರದ ವೆಂಕಟೇಶ್ವರ ದೇಗುಲದ ಆವರಣದಲ್ಲಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಸಿರು ದಳ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಮಿಕರು ಮತ್ತು ಕೊಳಗೇರಿ ನಿವಾಸಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.ಪಾನ್ ಪರಾಕ್, ಗುಟಕ ತಂಬಾಕು ಸೇವನೆ ಮದ್ಯಪಾನ ಧೂಮಪಾನ ಮಾಡದೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಸ್ವಚ್ಛತಾ ಕಾರ್ಯ ಮಾಡುವ ನಿಮಗೆ ಬೇಗನೆ ರೋಗಕ್ಕೆ ತುತ್ತಾಗುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ ಚಿಂದಿಯನ್ನು ಆಯುವಾಗ ಕಸ ಮುಸರೆಗಳನ್ನು ಮುಟ್ಟುವಾಗ ನಿಮ್ಮ ಕೈಗಳಿಗೆ ಕೈ ಕವಚ ಬಳಸಿ. ಚಟಗಳಿಗೆ ದಾಸರಾಗದೆ ಪೌಷ್ಟಿಕ ಆಹಾರ ಸೇವನೆ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪ್ರವೃತ್ತರಾಗಿರಿ ಎಂದರು.ಸ್ವಚ್ಛತಾ ಕಾರ್ಮಿಕರು ಆಭಾ ಕಾರ್ಡ್ ಮಾಡಿಸಿಕೊಳ್ಳಿ. ಈ ದಿನ ನಿಮ್ಮ ಸ್ಥಳದಲ್ಲಿಯೇ ಕಾರ್ಡ್ ಮಾಡಿಕೊಡಲಾಗುತ್ತದೆ. ಇದರಿಂದ ಉನ್ನತ ಮಟ್ಟದ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸಲು ಸರ್ಕಾರ ಅನುವು ಮಾಡಿಕೊಟ್ಟಿದೆ. ತಪ್ಪದೇ ಎಲ್ಲರೂ ಆ ಭಾ ಕಾರ್ಡ್ ಮಾಡಿಸಿಕೊಳ್ಳಿ ಎಂದರು.