ಸ್ವಚ್ಚ ಭಾರತ್ ಮಿಷನ್ ಯೋಜನೆ ಯಡಿ ಭೌತಿಕ, ಅರ್ಥಿಕ ಗುರಿ ಸಾಧನೆಗೆ ಸೂಚನೆ

ಚಾಮರಾಜನಗರ, ಜ.06:- ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯ, ಬೂದುನೀರು, ಕಪ್ಪುನೀರು ಮತ್ತುಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಾಂಶಗಳ ಭೌತಿಕ ಮತ್ತು ಆರ್ಥಿಕಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕ ಗಂಗಾಧರಸ್ವಾಮಿ ಅವರು ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿಯ ನೂತನ ಕೆ.ಡಿ.ಪಿ ಸಭಾಂಗಣದಲ್ಲಿಂದು ನಡೆದ ಸ್ವಚ್ಛ ಭಾರತ್ ಮಿಷನ್ (ಗ್ರಾ) ಮತ್ತುಜಲಜೀವನ್ ಮಿಷನ್ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಚ್ಛ ಸಂಕೀರ್ಣ ಘಟಕ, ಮಲತ್ಯಾಜ್ಯ ನೀರು ನಿರ್ವಹಣೆ ಘಟಕ, ಮಿನಿ ಎಂ.ಆರ್.ಎಫ್ ಘಟಕಗಳನ್ನು ಹೋಬಳಿಗೆ ಒಂದರಂತೆ ನಿರ್ಮಿಸಬೇಕು. ಏಕಬಳಕೆಯ ಪ್ಲಾಸ್ಟಿಕ್‍ಗಳನ್ನು ಪ್ರತಿಗ್ರಾಮ ಪಂಚಾಯಿತಿಗಳಿಂದ ಸಂಗ್ರಹಿಸಿ, ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡುವ ಅನುಷ್ಠಾನ ಇಲಾಖೆಗಳಾದ ಪಂಚಾಯತ್‍ರಾಜ್ ಇಂಜಿನೀಯರಿಂಗ್ ವಿಭಾಗ ಮತ್ತು ಕೆ.ಆರ್.ಐ.ಡಿ.ಎಲ್ ವತಿಯಿಂದ ಖರೀದಿಸಿ ಡಾಂಬರ್‍ರಸ್ತೆಯ ನಿರ್ಮಾಣದಲ್ಲಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಬ್ಯಾಚ್ 1, 2, 3 & 4 ರಅಡಿಯಲ್ಲಿ ನಿಗಧಿತ ಗುರಿ ಅನುಸಾರಸಾಧಿಸಿದ ಪ್ರಗತಿ ಬಗ್ಗೆ ಅವಲೋಕಿಸಿದ ನಿರ್ದೇಶಕರು ವಾರ್ಷಿಕ ಮತ್ತು ಮಾಸಿಕ ಗುರಿಗಳಿಗೆ ಅನುಗುಣವಾಗಿ ಕಾರ್ಯಾತ್ಮಕ ಗೃಹ ನಳ ನೀರು ಸಂಪರ್ಕ ಕಾಮಗಾರಿಗಳ ಪ್ರಗತಿ, ನೀರು ಪರೀಕ್ಷಾ ಲ್ಯಾಬ್‍ಗಳ ಪ್ರಗತಿ, ಬಹು ಗ್ರಾಮ ಕುಡಿಯುವ ನೀರುಯೋಜನೆ ಪ್ರಗತಿ ಹಾಗೂ ಸಮುದಾಯ ವಂತಿಕೆಯ ಸಂಗ್ರಹಣೆ ಕುರಿತು ತಾಲ್ಲೂಕು ವಾರು ಪ್ರಗತಿ ಪರಿಶೀಲಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ಮಾತನಾಡಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಗುಣಮಟ್ಟಕಾಯ್ದು ಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆಯ ಮೈಸೂರು ವಿಭಾಗೀಯ ಅಧೀಕ್ಷಕರಾದ ಎಂ.ಎಸ್‍ಕೃಷ್ಣಮೂರ್ತಿರವರು ಜಲಜೀವನ್ ಮಿಷನ್‍ಯೋಜನೆಯ ತಾಂತ್ರಿಕ ಅಂಶಗಳನ್ನು ಸಭೆಯಲ್ಲಿ ವಿವರಿಸಿದರು.
ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರು ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ನೋಡಲ್ ಅಧಿಕಾರಿಕೆ.ಬಿ.ಪ್ರಭುಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರಾದ ಗಂಗಾಧರಯ್ಯ, ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು, ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಎಲ್ಲಾ ಜಿಲ್ಲಾ ಸಮಾಲೋಚಕರು, ಜಲ ಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕರು, ಐ.ಎಸ್.ಐ ಸಿಬ್ಬಂದಿ ಐ.ಎಸ್.ಆರ್.ಎ ಸಿಬ್ಬಂದಿ, ಮನರೇಗಾ ಯೋಜನೆಯ ಜಿಲ್ಲಾ ಸಂಯೋಜಕರು, ಇತರರು ಸಭೆಯಲ್ಲಿ ಹಾಜರಿದ್ದರು.