ಸ್ವಚ್ಚತೆ ದೈನಂದಿನ ಭಾಗವಾಗಬೇಕು: ಎಸ್.ಗಂಗಾಧರ್

ಚಾಮರಾಜನಗರ, ಮಾ.26- ಜಿಲ್ಲೆಯ ಹನೂರು ತಾಲ್ಲೂಕಿನ ತಾಳಬೆಟ್ಟದಲ್ಲಿ ನೆಹರು ಯುವ ಕೇಂದ್ರ, ಚಾಮರಾಜನಗರ ಹಾಗೂ ಓಬಳಿ ಕಲ್ಯಾಣ ಸಂಘ, ಹನೂರು ಇವರ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಓಬಳಿ ಶಿಕ್ಷಣ ಸಂಸ್ಥೆ ಸಂಸ್ಥಾಪಕರು ಹಾಗೂ ಮಾಜಿ ಸೈನಿಕರಾದ ಎಸ್.ಗಂಗಾಧರ್ ಅವರು ಸ್ವಚ್ಛತೆ ಎಂಬುದು ನಮ್ಮ ದೈನಂದಿನ ಬದುಕಿನ ಭಾಗವಾಗಬೇಕು ಆಗಾದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ. ಮಹಾತ್ಮ ಗಾಂಧೀಜಿ ಅವರು ಸಹ ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಟ್ಟಿದ್ದರು.ಕೊರೊನಾ ಬಂದ ನಂತರ ಪ್ರತಿಯೊಬ್ಬರಿಗೂ ಶುಚಿಯಾಗಿರುವುದು ಹಾಗೂ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರ ಮಹತ್ವ ಬಂದಿದೆ ಎಂದರು.
ತಾಳಬೆಟ್ಟ ಸುತ್ತಲಿನ ಪ್ರದೇಶದಲ್ಲಿ ನಮ್ಮ ತಂಡದಿಂದ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡಲಾಗಿದ್ದು, ಸಾರ್ವಜನಿಕರು ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ಎಲ್ಲೆಂದರೆರಲ್ಲಿ ಕಸ,ತ್ಯಾಜ್ಯಗಳನ್ನು ಬೀಸಾಡಬಾರದು ಇದರಿಂದ ಅನೈರ್ಮಲ್ಯ ಉಂಟಾಗಲಿದೆ. ಕಾಲ್ನಡಿಗೆಯಲ್ಲಿ ಬರುವಂತಹ ಭಕ್ತಾದಿಗಳು ಸಹ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಸಲಹೆ ನೀಡಿದರು. ಸ್ವಚ್ಚತೆ ಕುರಿತು ಈ ದಿನ ಅರಿವು ಸಹ ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಲೆಮಹದೇಶ್ವರ ಬೆಟ್ಟದ ಎಸಿಎಫ್ ಪ್ರಭಾಕರ್ ಪ್ರಿಯದರ್ಶಿ, ಡಿವೈಆರ್‍ಎಫ್ ಶ್ರೀಧರ್ ಸೇರಿದಂತೆ ಅರಣ್ಯ ಸಿಬ್ಬಂದಿಗಳು, ಓಬಳಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಹಾಜರಿದ್ದರು.