ಸ್ವಚ್ಚತೆ, ಕುಡಿವ ನೀರಿಗೆ ಆದ್ಯತೆ: ಗೋವಿಂದರಾಜು

ಚಿಕ್ಕನಾಯಕನಹಳ್ಳಿ, ಜು. ೨೯- ಗ್ರಾಮಗಳಲ್ಲಿ ನೈರ್ಮಲ್ಯ ಹಾಗೂ ಕುಡಿಯುವ ನೀರಿನ ನಿರ್ವಹಣೆ ಮಾಡಲು ಮೊದಲು ಆದ್ಯತೆ ನೀಡುವುದಾಗಿ ಮಲ್ಲಿಗೆರೆ ಗ್ರಾಂ.ಪಂ ನೂತನ ಅಧ್ಯಕ್ಷ ಹೆಚ್.ಎನ್.ಗೋವಿಂದರಾಜು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರನ್ನು ಭೇಟಿ ಮಾಡಿ ನಂತರ ಮಲ್ಲಿಗೆರೆ ಗ್ರಾ.ಪಂ. ಸದಸ್ಯರುಗಳಿಂದ ಹಾಗೂ ಪಕ್ಷದ ಮುಖಂಡರುಗಳಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮಲ್ಲಿಗೆರೆ ಗ್ರಾಮ ಪಂಚಾಯ್ತಿಗೆ ಎರಡನೇ ಅವಧಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಭಾರತೀಯ ಜನತಾಪಾರ್ಟಿ ಆಯ್ಕೆ ಮಾಡಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಗ್ರಾಮಗಳ ಅಭಿವೃದ್ದಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದೆ. ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್ ಯೋಜನೆಯ ಕೆಲಸವು ನಮ್ಮ ಪಂಚಾಯ್ತಿಯಲ್ಲಿ ಹಂತ ಹಂತವಾಗಿ ನಡೆಯುತ್ತಿದೆ. ದೇಶದಲ್ಲಿ ಅನೈರ್ಮಲ್ಯವನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಅಭಿಯಾನವನ್ನು ಜಾರಿಗೆ ತಂದಿದ್ದಾರೆ. ಶುದ್ಧ ಕುಡಿಯುವ ನೀರು ಹಾಗೂ ಪರಿಸರ ಸಂರಕ್ಷಣೆ ಜನರಿಗೆ ಅತ್ಯವಶ್ಯಕವಾಗಿದೆ. ಈ ವಿಚಾರದಲ್ಲಿ ಹೆಚ್ಚು ಕೆಲಸ ಮಾಡಲು ಕಂಕಣ ತೊಟ್ಟಿದ್ದೇನೆ ಎಂದರು.
ರಾಜ್ಯದಲ್ಲಿ ಬೇರೆ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ಅಪಾರ ಜನ ಪರ ಕೆಲಸಗಳನ್ನು ಕಾನೂನು ಮತ್ತು ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ತಮ್ಮ ಇಚ್ಛಾ ಶಕ್ತಿಯಿಂದ ನೆರವೇರಿಸುತ್ತಿದ್ದಾರೆ. ಜೆ.ಸಿ.ಎಂ.ರವರ ಮಾರ್ಗದರ್ಶನದಲ್ಲಿ ಪಂಚಾಯ್ತಿಯ ಅಭಿವೃದ್ದಿ ಕೆಲಸಕ್ಕೆ ಮುಂದಾಗುವುದಾಗಿ ಹೇಳಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಗ್ರಾಮಗಳ ಅಭಿವೃದ್ದಿಗೆ ಪಂಚಾಯ್ತಿಯ ಸದಸ್ಯರುಗಳ ವಿಶ್ವಾಸವನ್ನು ಗಳಿಸಿ ಪ್ರಾಮಾಣಿಕವಾಗಿ ಜನರ ಕೆಲಸಗಳನ್ನು ಮಾಡುವುದು ಅಧ್ಯಕ್ಷರ ಮೇಲಿನ ಜವಾಬ್ದಾರಿಯಾಗಿರುತ್ತದೆ ಎಂದರು.
ತಾಲ್ಲೂಕು ಬಗರ್ ಹುಕುಂ ಕಮಿಟಿಯ ಸದಸ್ಯರಾದ ನಿರಂಜನಮೂರ್ತಿ ಮಾತನಾಡಿ, ಗ್ರಾಮ ಪಂಚಾಯ್ತಿಗೆ ನುತನವಾಗಿರುವ ಗೋವಿಂದರಾಜು ಸಮೀಪಿಸುತ್ತಿರುವ ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಒಳ್ಳೆಯ ಸಂಗತಿ. ಜನರ ಮನಸ್ಸುಗಳನ್ನು ಆಕರ್ಷಿಸಲು ತಮ್ಮ ಉತ್ತಮ ಕೆಲಸಗಳಿಂದ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರುಗಳಾದ ಕೆಂಪದೇವಮ್ಮ, ಅನುಪಮ, ಪಲ್ಲವಿ, ಸರಸ್ವತಿ, ಜ್ಯೋತಿ, ಮಣಿ, ವಿಜಯಕುಮಾರ್, ಮುಖಂಡರಾದ ದಾವೊಂದ ಹೊಸಹಳ್ಳಿ ಕರಿಯಪ್ಪ, ಕಾನ್ಕೆರೆ ಸಿದ್ದೇಶ್ ಮತ್ತಿತರರು ಪಾಲ್ಗೊಂಡಿದ್ದರು.