ಸ್ವಚ್ಚತೆಯೇ ನಮ್ಮ ಧ್ಯೇಯವಾಗಲಿ

ಕೋಲಾರ,ಅ,೩-ಗಾಂಧಿ,ಶಾಸ್ತ್ರೀಜಿ ಜಯಂತಿ ಅಂಗವಾಗಿ ತಾಲ್ಲೂಕಿನ ಅರಾಭಿಕೊತ್ತನೂರುಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಶ್ರಮದಾನ ನಡೆಸಿದ್ದು, ಸ್ವಚ್ಚತೆಯೇ ನಮ್ಮ ಧ್ಯೇಯವಾಗಿಸೋಣ ಎಂದು ಮುಖ್ಯಶಿಕ್ಷಕಿ ಸಿದ್ದೇಶ್ವರಿ ಕರೆ ನೀಡಿದರು.
ಶಾಲೆಯ ಆವರಣದಲ್ಲಿ ಸ್ವಚ್ಚತಾ ಶ್ರಮದಾನ, ಭಜನೆ, ಸರ್ವಧರ್ಮ ಪ್ರಾರ್ಥನೆಯೊಂದಿಗೆ ಮಹಾತ್ಮಾಗಾಂಧೀಜಿಯವರ ಆದರ್ಶಗಳ ಸ್ಮರಣೆ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಶ್ರಮದಾನದ ಗಾಂಧೀಜಿಯವರಿಗೆ ಪ್ರಿಯವಾದ ಕೆಲಸ, ಅವರು ಸ್ವಾವಲಂಬಿಯಾಗಿ ಜೀವನ ನಡೆಸಬೇಕೆಂದು ಆಶಿಸುತ್ತಿದ್ದರು, ಅವರ ಆಶಯದಂತೆ ತಿಂಗಳಿಗೊಂದು ದಿನ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಪ್ರಧಾನಿಯವರು ಪರಿಸರ ಕಾಳಜಿಯಿಂದ ಏಕಬಳಕೆ ಪ್ಲಾಸ್ಟಿಕ್ ಬಳಕೆ ರದ್ದು ಮಾಡುವ ಸಂಕಲ್ಪ ಮಾಡಿದ್ದು, ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಕೈಜೋಡಿಸಬೇಕು, ನಿಮ್ಮ ಪೋಷಕರಿಗೆ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು ಎಂದರು.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವೆಂಕಟಾಚಲಪತಿ ಮಾತನಾಡಿ, ಗಾಂಧೀಜಿಯವರ ತತ್ವ ಪಾಲಿಸೋಣ ಸ್ವಚ್ಚತೆಯನ್ನು ಕಾಪಾಡೋಣ ಶಾಲೆಯ ಆವರಣ, ಮನೆಯಲ್ಲಿಯೂ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಶ್ರಮಿಸೋಣ ಎಂದರು.
ಗಾಂಧೀಜಿ,ಶಾಸ್ತ್ರೀಜಿಯವರ ಆದರ್ಶ ಪಾಲಿಸುವ ಮೂಲಕ ಶಾಲೆಯ ಸ್ವಚ್ಚತೆಗಾಗಿ ವಾರಕ್ಕೊಂದು ದಿನ ಶ್ರಮದಾನದಲ್ಲಿ ಪಾಲ್ಗೊಳ್ಳುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು.
ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಎ.ಮಹೇಂದ್ರ ಮಾತನಾಡಿ, ಗಾಂಧೀಜಿಯವರ ಅಹಿಂಸಾ ತತ್ವ, ಶಾಸ್ತ್ರೀಜಿಯವರ ಪ್ರಾಮಾಣಿಕತೆ ಮಕ್ಕಳು ಪಾಲಿಸಬೇಕು, ಅವರಂತೆ ಈ ದೇಶದ ಮಹಾನ್ ನಾಯಕರಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಕಿ ಲೀಲಾ ಅವರು ಮಕ್ಕಳಿಗೆ ‘ರಘುಪತಿರಾಘವ ರಾಜಾರಾಮ್ ಹಾಗೂ ಸಬರಮತಿ ಆಶ್ರಮದ ಪ್ರಾರ್ಥನೆ, ಸರ್ವಧರ್ಮ ಪ್ರಾರ್ಥನೆ ನಡೆಸಿಕೊಟ್ಟರು.
ಇದಕ್ಕೂ ಮುನ್ನಾ ಶಿಕ್ಷಕರು,ಮಕ್ಕಳು ಶಾಲೆಯ ಆವರಣವನ್ನು ಸ್ವಚ್ಚಗೊಳಿಸುವ ಮೂಲಕ ಶ್ರಮದಾನದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ಶ್ವೇತಾ, ಸುಗುಣಾ, ಲೀಲಾ, ಫರೀದಾ, ಶ್ರೀನಿವಾಸಲು, ರಮಾದೇವಿ, ಚಂದ್ರಶೇಖರ್ ಹಾಜರಿದ್ದರು.