
ಕನಕಪುರ, ಜು.೨೧:ಗ್ರಾಮದಲ್ಲಿ ಮತ್ತು ಮನೆಯ ಸುತ್ತಮುತ್ತಲ ಜಾಗವನ್ನು ಶುಚಿತ್ವವಾಗಿಟ್ಟುಕೊಂಡು, ಸ್ವಚ್ಛತೆ ಕಾಪಾಡಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ, ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಬೇಕೆಂದು ಡಾ.ಚಂದ್ರಮ್ಮ ದಯಾನಂದ ಸಾಗರ್ ಆಸ್ಪತ್ರೆಯ ನೇತ್ರ ಚಿಕಿತ್ಸಕ ಡಾ.ಸುದೀಪ್ ತಿಳಿಸಿದರು.
ತಾಲ್ಲೂಕಿನ ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಾಡೇದೊಡ್ಡಿ ಗ್ರಾಮದಲ್ಲಿ ರೋಟರಿ ಕನಕಪುರ, ರೂರಲ್ ಕಾಲೇಜ್ ಎನ್ಎಸ್ಎಸ್ ಘಟಕದೊಂದಿಗೆ ಆಯೋಜನೆ ಮಾಡಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ನಾವು ತಿನ್ನುವ ಆಹಾರ ಶುಚಿ ಮತ್ತು ರುಚಿಯಾಗಿರಬೇಕು, ಆರೋಗ್ಯ ಸಮಸ್ಯೆಗಳು ಬಂದಾಗ ಅದನ್ನು ನಿರ್ಲಕ್ಷ ಮಾಡದೆ ಪ್ರಾರಂಭದಲ್ಲೇ ತೋರಿಸಿಕೊಳ್ಳಬೇಕು, ಯಾವುದೆ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಬಾರದು, ದಯಾನಂದಸಾಗರ ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಕನಕಪುರ ರೋಟರಿ ಅಧ್ಯಕ್ಷ ಕೆ.ಗವಿರಾಜು ಮಾತನಾಡಿ ರೋಟರಿ ಸಂಸ್ಥೆಯು ಹತ್ತು ಹಲವು ಸೇವಾ ಕಾರ್ಯವನ್ನು ನಡೆಸುತ್ತದೆ. ಅದರಲ್ಲಿ ಆರೋಗ್ಯ ಶಿಬಿರವು ಒಂದಾಗಿದ್ದು ಇಂದು ಉಚಿತ ಆರೋಗ್ಯ ಶಿಬಿರವನ್ನು ನಡೆಸುತ್ತಿದ್ದೇವೆ. ಗ್ರಾಮೀಣ ಭಾಗದ ಜನತೆ ಪಟ್ಟಣ ಪ್ರದೇಶಕ್ಕೆ ಹೋಗುವುದು ಕಷ್ಟವಾಗುತ್ತದೆ. ಈ ಒಂದು ಶಿಬಿರದಲ್ಲಿ ಎಲ್ಲರೂ ಆರೋಗ್ಯ ಸಮಸ್ಯೆಗಳನ್ನು ತೋರಿಸಿ ಪರಿಹರಿಸಿಕೊಳ್ಳಿ ಎಂದು ತಿಳಿಸಿದರು.
ರೋಟರಿ ಕಾರ್ಯದರ್ಶಿ ಎ.ವಿ.ಜಯಶಂಕರ್, ಮಾಜಿ ಅಧ್ಯಕ್ಷರಾದ ಆನಮಾನಹಳ್ಳಿ ನಟೇಶ್, ಭಾನುಪ್ರಕಾಶ್, ಪದಾಧಿಕಾರಿಗಳಾದ ಮುನಿರಾಜು, ಸಿದ್ದರಾಜು, ರಂಜನ್, ಬಸಪ್ಪ, ಎನ್ಎಸ್ಎಸ್ ಶಿಬಿರದ ಶಿಭಿರಾಧಿಕಾರಿ ಎ.ಪಿ.ಪ್ರಕಾಶ್, ಸಹ ಶಿಬಿರಾಧಿಕಾರಿ ದೇವರಾಜು, ಉಪನ್ಯಾಸಕರಾದ ಸಿಂಧು, ಸುಷ್ಮಾ ಸೇರಿದಂತೆ ೫೫ ಮಂದಿ ಶಿಬಿರಾರ್ಥಿಗಳು ಗ್ರಾಮದ ಮುಖಂಡರಾದ ಕಬ್ಬಾಳೇಗೌಡ, ಕಾಳೇಗೌಡ, ಶಿವಕುಮಾರ್, ಹರೀಶ್ಕುಮಾರ್, ಎಂ.ಲಕ್ಷ್ಮಣ್ ಉಪಸ್ಥಿತರಿದ್ದರು.
ದಯಾನಂದ ಸಾಗರ್ ಆಸ್ಪತ್ರೆಯ ಡಾ.ನಿಖಿತ, ಡಾ.ಜಾವಿದ್, ಡಾ.ಸಹನಾ, ಡಾ.ನಿರಂಜನ್ ಆರೋಗ್ಯ ಶಿಬಿರದಲ್ಲಿ ಶಿಬಿರಾರ್ಥಿಗಳ ತಪಾಸಣೆ ನಡೆಸಿ, ಔಷಧಿಗಳನ್ನು ನೀಡಿದರು. ಆರೋಗ್ಯ ಶಿಬಿರದಲ್ಲಿ ೨೦೦ ಮಂದಿ ಪಾಲ್ಗೊಂಡಿದ್ದು ತಪಾಸಣೆ ಮಾಡಿಸಿಕೊಂಡರು.