ಸ್ವಚ್ಚತೆಯಿಂದ ಆರೋಗ್ಯ ನೆಮ್ಮದಿ ಜೀವನ : ನ್ಯಾ ದೊಡ್ಡಮನಿ

ಸಿಂಧನೂರು.ನ.೨೨: ನಮ್ಮ ಮನೆ ಹಾಗೂ ನೆರೆಹೊರೆ ಪ್ರದೇಶವನ್ನು ಸ್ವಚ್ಚತೆಯಾಗಿ ಇಟ್ಟುಕೊಂಡು ನಾವು ಮತ್ತು ನೆರೆಹೊರೆಯವರು ಆರೋಗ್ಯದ ನೆಮ್ಮದಿ ಜೀವನ ನಡೆಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೇಯಾಂಶ ದೊಡ್ಡಮನಿ ಹೇಳಿದರು.
ನಗರದ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ನ್ಯಾಯವಾದಿಗಳ ಸಂಘ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಪರಿಸರ ರಕ್ಷಣೆ ದಿನಾಚರಣೆ ಆಂದೋಲನಾ ಅಂಗವಾಗಿ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚತಾ ದಿನಾಚರಣೆ ಹಾಗೂ ಮಾಸ್ಕ್ ವಿತರಿಸಿ ಮಾತನಾಡಿದ ಅವರು ಸ್ವಚ್ಚತೆ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಹಲವಾರು ರೋಗ ರುಜಿನಗಳಿಗೆ ಈಡಾಗಿ ಆರೋಗ್ಯ ಹದಗೆಟ್ಟು ಕಷ್ಟದ ಜೀವನ ನಡೆಸುವ ಬದಲು ಸ್ವಚ್ಚತೆ ಕಾಪಾಡುವ ಜೊತೆಗೆ ಆರೋಗ್ಯವಾಗಿರಬೇಕು ಎಂದರು.
ನ್ಯಾಯವಾದಿಗಳು ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ನಗರಸಭೆ ಪೌರ ಕಾರ್ಮಿಕರಿಗೆ ಇದೇ ಸಂದರ್ಭದಲ್ಲಿ ಮಾಸ್ಕ್ ವಿತರಿಸಲಾಯಿತು. ಪರಿಸರ ರಕ್ಷಣೆ ದಿನಾಚರಣೆ ದಿನದಂದು ಇಂದು ದುರ್ಬಲರ ದಿನವನ್ನಾಗಿ ಸಹ ಆಚರಿಸಲಾಗುತ್ತಿದೆ. ಕೃಷಿ , ಪೌರ ಕಾರ್ಮಿಕರಿಗ ಕಾನೂನು ಅರಿವಿನ ಬಗ್ಗೆ ತಿಳಿವಳಿಕೆ ನೀಡಲಾಗುವುದು ಎಂದು ತಿಳಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ರವಿಕುಮಾರ.ಕೆ. ವಕೀಲರಾದ ಜಿ.ಎಸ್.ಆರ್.ಕೆರೆಡ್ಡಿ , ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಜೆ.ರಾಯಪ್ಪ ವಕೀಲ, ನಗರಸಭೆ ಪರಿಸರ ಅಭಿಯಂತರರಾದ ಸುಬ್ರಮಣ್ಯ, ಹಿರಿಯ ಆರೋಗ್ಯ ನಿರೀಕ್ಷಕರಾದ ಕಿಶನರಾವ್ ,ಲಕ್ಷ್ಮಿಪತಿ ಸೇರಿದಂತೆ ನಗರಸಭೆ ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.