ಸ್ವಚ್ಚತೆಯಲ್ಲಿ ತುಮಕೂರಿಗೆ ೨ನೇ ಸ್ಥಾನ

ತುಮಕೂರು, ಜ. ೩- ಸ್ವಚ್ಚತೆಯಲ್ಲಿ ೪೮ನೇ ಸ್ಥಾನದಲ್ಲಿದ್ದ ತುಮಕೂರು ಮಹಾನಗರ ಪಾಲಿಕೆ ಈಗ ೨ನೇ ಸ್ಥಾನದಲ್ಲಿದೆ. ಇದು ಮೂದಲನೆ ಸ್ಥಾನಕ್ಕೆ ಬರಲು ಪಾಲಿಕೆಯ ಸಿಬ್ಬಂದಿಗಳು ಸೇರಿದಂತೆ ನಗರದ ನಾಗರಿಕರು ಸಹಕಾರ ನೀಡಬೇಕು ಎಂದು ಮೇಯರ್ ಫರೀದಾಬೇಗಂ ಮನವಿ ಮಾಡಿದರು.
ನಗರದ ಟೌನ್‌ಹಾಲ್ ವೈತ್ತದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಿದ್ದ ಸ್ವಚ್ಚ ಸರ್ವೇಕ್ಷಣ್- ೨೦೨೧ ಅಂಗವಾಗಿ ಸೈಕ್ಲಾಥಾನ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತುಮಕೂರು ಮಹಾನಗರ ಪಾಲಿಕೆ ಮೈಸೂರನ್ನು ಹಿಂದಿಕ್ಕಿ ಮೊದಲನೆಯಯ ಸ್ಥಾನಕ್ಕೆ ಬರುವವರೆಗೂ ನಾವು ವಿರಮಿಸುವುದಿಲ್ಲ. ಪಾಲಿಕೆಯ ೩೫ ವಾರ್ಡ್ ಸದಸ್ಯರೊಂದಿಗೆ ಐನೂರಕ್ಕೂ ಹೆಚ್ಚು ಮಂದಿ ಪೌರ ಕಾರ್ಮಿಕರು, ಅಧಿಕಾರಿಗಳು, ಸಿಬ್ಬಂದಿಗಳ ಜತೆಗೂಡಿ ಸ್ವಚ್ಚತೆಗೆ ನಗರದ ಪ್ರತಿಯೊಬ್ಬರೂ ಸಹಕರಿಸಿದರೆ ರೋಗ ಮುಕ್ತ ನಗರವನ್ನಾಗಿ ಮಾಡಬಹುದು ಎಂದರು.
ಸ್ವಚ್ಚತೆಗೆ ಸಂಬಂಧಿಸಿದಂತೆ ಪಾಲಿಕೆಯು ನೂತನವಾಗಿ ಬಿಡುಗಡೆ ಮಾಡಿರುವ ಆಪ್ ಇನ್‌ಸ್ಟಾಲ್ ಮಾಡಿಕೊಂಡು ಅದರ ಮೂಲಕ ಪ್ರತಿನಿತ್ಯ ಸಲಹೆ-ಸೂಚನೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.
ನಗರದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್‌ಸಿಟಿ ಯೋಜನೆ ಸುಮಾರು ೨೦೦೦ ಕೋಟಿ ಅನುದಾನದಲ್ಲಿ ಅಭಿವೃದ್ಧಿಯಾಗುತ್ತಿದೆ. ಕೋವಿಡ್-೧೯ ವೈರಸ್ ಹಿನ್ನೆಲೆಯಲ್ಲಿ ಕಳೆದ ೯ ತಿಂಗಳಿಂದ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದ ಪರಿಣಾಮವಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು.
ಈಗಾಗಲೇ ಶೇ. ೯೦ ರಷ್ಟು ಕಾಮಗಾರಿಗಳು ಮುಗಿದಿವೆ . ಇನ್ನೊಂದು ವರ್ಷದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಆಗ ತುಮಕೂರು ನಗರ ಅತ್ಯಂತ ಸುಂದರವಾಗಿ ಕಾಣಲಿದೆ. ಮೈಸೂರನ್ನು ತುಮಕೂರು ಹಿಂದಿಕ್ಕಿ ಸ್ವಚ್ಚತೆಯಲ್ಲಿ ಮೂದಲ ಸ್ಥಾನಕ್ಕೇರಲಿದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಸ್ಸಚ್ಚತೆಗೆ ಆದ್ಯತೆ ನೀಡಬೇಕು ಎಂದರು.
ನಗರದ ೩೫ ವಾರ್ಡ್‌ಗಳಲ್ಲಿ ದಿನನಿತ್ಯ ಪಾಲಿಕೆಯ ಕಾರ್ಪೋರೇಟರ್‌ಗಳು ಸೇರಿದಂತೆ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು, ಪೌರ ಕಾರ್ಮಿಕರು, ಕುಡಿಯುವ ನೀರು, ರಸ್ತೆಗಳು, ಚರಂಡಿ ವ್ಯವಸ್ಥೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ರೋಗ ಮುಕ್ತ ನಗರವನ್ನಾಗಿ ಮಾಡಲು ಪಾಲಿಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳಿದರು.