
ಮೈಸೂರು,ಮಾ.೨೯- ಈ ಬಾರಿ ಕಾಂಗ್ರೆಸ್ ಪಕ್ಷ ಏನೇ ಆದರೂ ಕೂಡ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. ೧೨೦ರಿಂದ ೧೩೦ ಸೀಟು ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ನಂಜನಗೂಡಿಗೆ ಹೋಗಿದ್ದೆ. ಇವತ್ತು ವರುಣಾಕ್ಕೆ ಹೋಗುತ್ತಿದ್ದೇನೆ. ಅದು ಖಾಸಗಿ ಕಾರ್ಯಕ್ರಮ. ನಮ್ಮ ಎದುರಾಳಿ ಯಾರು ಅಂತ ಯಾವತ್ತೂ ಯೋಚಿಸಿಲ್ಲ. ಜನರು ಆಶೀರ್ವಾದ ಮಾಡುತ್ತಾರೆ. ವರುಣಾ ನನ್ನ ಹುಟ್ಟಿದೂರು, ಅಲ್ಲಿಂದಲೇ ರಾಜಕೀಯ ಪ್ರಾರಂಭಿಸಿದ್ದು, ೭೮ ರಲ್ಲಿ ತಾಲೂಕಾಬೋರ್ಡ್‌ಗೆ ಸ್ಪರ್ಧಿಸಿದ್ದು, ಅಲ್ಲಿಂದಲೇ , ಹಾಗಾಗಿ ೨೦೦೮ರಲ್ಲಿ, ೨೦೧೩ರಲ್ಲಿ ನಿಂತಿದ್ದೆ. ಈ ಬಾರಿ ಕೊನೆಯ ಚುನಾವಣೆಯನ್ನು ನಾನು ನಮ್ಮ ಹುಟ್ಟೂರಿನಿಂದಲೇ ಸ್ಪರ್ಧೆ ಮಾಡುತ್ತೇನೆ. ಜನರು ಆಶೀರ್ವಾದ ಮಾಡುತ್ತಾರೆಂಬ ನಂಬಿಕೆ ಇದೆ. ನಂತರ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ತಿಳಿಸಿದರು. ಕೋಲಾರದಲ್ಲಿಯೂ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಕೋಲಾರದವರು ಕರೆಯುತ್ತಿದ್ದಾರೆ ಹೈಕಮಾಂಡ್ ಒಪ್ಪಿದರೆ ನಿಲ್ಲುತ್ತೇನೆ ಎಂದರು.
ಪೀಪಲ್ ರೆಪ್ರೆಸೆಂಟೇಶನ್ ಆಯಕ್ಟ್ (ಜನರ ಪ್ರಾತಿನಿಧ್ಯ ಕಾಯ್ದೆ)ನಲ್ಲಿ ಏನು ಹೇಳುತ್ತಾರೆ. ಅದನ್ನು ಚಾಚೂ ತಪ್ಪದೆ ಚುನಾವಣಾ ಆಯೋಗ ಜಾರಿಗೆ ತರಬೇಕು. ಚುನಾವಣಾ ಅಕ್ರಮಗಳನ್ನು ತಡೆಯುವ ಕೆಲಸ ಮಾಡಬೇಕು. ಸಂಪೂರ್ಣವಾಗಿ ತಡೆಯುವ ಕೆಲಸ ಮಾಡಬಹುದು. ಅದು ಯಾವುದೇ ಪಕ್ಷ ಇರಲಿ, ಆಡಳಿತದಲ್ಲಿರುವ ಪಕ್ಷಗಳು ಹೆಚ್ಚು ಅಕ್ರಮಗಳನ್ನು ಮಾಡುತ್ತವೆ. ದುಡ್ಡನ್ನು ಹಂಚುವುದು ಬೇರೆ ಬೇರೆ ಆಮಿಷ ಒಡ್ಡುವುದನ್ನು ಆಡಳಿತ ಪಕ್ಷಗಳು ಮಾಡುತ್ತವೆ. ಅವರ ಮೇಲೆ ಕಡಿವಾಣ ಹಾಕುವ ನಿಗಾ ಇಡುವ ಕೆಲಸ ಮಾಡಬೇಕು ಎಂದರು.
ಹೆಲಿಕಾಪ್ಟರ್ ನಲ್ಲಿ ಪ್ರವಾಸ ಮಾಡುತ್ತೇನೆ. ಒಂದು ದಿನಕ್ಕೆ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಸುತ್ತೇನೆ. ಮೂವತ್ತು ದಿನದಲ್ಲಿ ೧೨೦ ವಿಧಾನಸಭಾ ಕ್ಷೇತ್ರಗಳ ಪ್ರವಾಸ ಪೂರೈಸಬಹುದು. ಪ್ರಜಾಧ್ವನಿಯಲ್ಲಿ ೬೦ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ನಡೆಸಿದ್ದೇನೆ. ಇನ್ನೂ ೧೨೦ ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡುತ್ತೇನೆ. ಡಿ.ಕೆ.ಶಿವಕುಮಾರ್ ಕೂಡ ಕೆಲವು ವಿಧಾನ ಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡಿದ್ದಾರೆ. ನಿನ್ನೆನೂ ಕೂಡ ಅವರು ಶ್ರೀರಂಗಪಟ್ಟಣಕ್ಕೆ ಹೋಗಿದ್ದರು ಎಂದು ತಿಳಿಸಿದರು. ಎರಡನೇ ಪಟ್ಟಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಪ್ರಶ್ನಿಸಿದಾಗ ನಾಳೆ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಇದೆ, ಅದು ಮುಗಿದ ಮೇಲೆ ಸೆಂಟ್ರಲ್ ಎಲೆಕ್ಷನ್ ಕಮಿಟಿ ಮೀಟಿಂಗ್ ಇದೆ ಅದಾದ ಮೇಲೆ ಬಿಡುಗಡೆ ಮಾಡುತ್ತೇವೆ ಎಂದರು. ಒಂದೊಂದು ಕ್ಷೇತ್ರದಲ್ಲಿ ಇಬ್ಬಿಬ್ಬರು ಮೂರು ಮಂದಿ ಆಕಾಂಕ್ಷಿಗಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಗಾಳಿ ಬೀಸಲು ಆರಂಭವಾಗಿದೆ. ಹಾಗಾಗಿ ಆಕಾಂಕ್ಷಿಗಳು ಜಾಸ್ತಿ ಆಗಿದ್ದಾರೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಬಿಜೆಪಿ-ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ ಆದರೂ ಆಗಬಹುದು, ಹಳೆ-ಮೈಸೂರೋ, ಹೊಸ ಮೈಸೂರೋ ಹೋದ ಸಲ ಅಂತೂ ಆಗಿತ್ತು. ಈ ಸಲ ಏನಾಗುತ್ತದೆ ಎಂದು ಕಾದು ನೋಡಬೇಕು. ನನಗೆ ಆಂತರಿಕ ಒಪ್ಪಂದ ಮಾಡಿಕೊಳ್ಳುತ್ತಾರೆಂಬ ಸೂಚನೆ ಇದೆ. ಈ ಸಾರಿ ಕಾಂಗ್ರೆಸ್ ಪಕ್ಷ ಏನೇ ಆದರೂ ಕೂಡ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. ೧೨೦ರಿಂದ ೧೩೦ ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.