ಸ್ವಂತ ಪುತ್ರಿಯ ಮೇಲೆಯೇ ಅತ್ಯಾಚಾರ ಎಸಗಿದ ತಂದೆ

ಬೀದರ್, ಜು.31- ತಂದೆ ಮತ್ತು ಪುತ್ರಿಯ ಸಂಬಂಧ ಪವಿತ್ರವಾದದ್ದು, ಅವರ ವಿಶೇಷ ಬಾಂಧವ್ಯಕ್ಕೆ ಯಾವುದೇ ಸರಿಸಾಟಿಯಾಗುವುದಿಲ್ಲ. ಆದಾಗ್ಯೂ, ಇಲ್ಲೊಬ್ಬ ತಂದೆ ತನ್ನ ಸ್ವಂತ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವ ತಲೆ ತಗ್ಗಿಸುವ ಪೈಶಾಚಿಕ ಕೃತ್ಯ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗ್ರಾಮವೊಂದರಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದಾಗ ಅತ್ಯಾಚಾರ ಎಸಗುತ್ತಿದ್ದ. ಈಗ ಬಾಲಕಿಯ ಅಜ್ಜಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಈ ಕುರಿತು ಬಸವಕಲ್ಯಾಣ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ.
ಕಳೆದ ಒಂದು ವರ್ಷದಿಂದ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಎನ್ನಲಾಗಿದೆ. ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಆತ ಬೆದರಿಕೆ ಹಾಕಿದ್ದ. ಇದರಿಂದ ಭಯದಿಂದ ಪುತ್ರಿಯು ಜೀವಕ್ಕೆ ಹೆದರಿ ಮಾನಸಿಕವಾಗಿ ಯಾತನೇ ಅನುಭವಿಸುತ್ತಲೇ ಬಂದಿದ್ದಳು. ಕಳೆದ ಭಾನುವಾರ ರಾತ್ರಿ ತಂದೆ ಎಲ್ಲರೂ ಮಲಗಿರುವ ವೇಳೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ ಅಜ್ಜಿಯ (ಅತ್ಯಾಚಾರಿಯ ತಾಯಿ) ಕಣ್ಣಿಗೆ ಬಿದ್ದು, ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದೊಂದು ಪೋಕ್ಸೋ ಪ್ರಕರಣ ಆಗಿರುವುದರಿಂದ ಹೆಚ್ಚಿನ ಮಾಹಿತಿ ನೀಡುವಂತಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ.