ಸ್ವಂತ ಹಣದಲ್ಲಿ ರಸ್ತೆ ದುರಸ್ತಿ

ಬೆಂಗಳೂರು, ಜೂ.೧೩- ರಾಜಧಾನಿ ಬೆಂಗಳೂರಿನ ಸಿವಿ ರಾಮನ್ ನಗರ ಕ್ಷೇತ್ರದ ಕಗ್ಗದಾಸಪುರದ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ಬವಣೆ ಮುಂದುವರೆದಿದ್ದು, ಸ್ವಯಂ ಇಲ್ಲಿನ ನಿವಾಸಿಗಳೇ ಸ್ವತಃ ಖರ್ಚಿನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ.
ಪ್ರತಿ ಬಾರಿ ಮಳೆ ಬಂದಾಗ ಸಿವಿ ರಾಮನ್ ನಗರ ಕ್ಷೇತ್ರದ ಕಗ್ಗದಾಸಪುರದ ವರ್ಸೋವಾ ಲೇಔಟ್ ನಿವಾಸಿಗಳು ಭಯಭೀತರಾಗುತ್ತಿದ್ದು, ಪಕ್ಕದ ಮಳೆನೀರು ಚರಂಡಿಯಿಂದ ಹಠಾತ್ ಪ್ರವಾಹದ ರೂಪದಲ್ಲಿ ಹೊರಬರುತ್ತಿದ್ದು, ರಸ್ತೆಗಳ ದಯನೀಯ ಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಒಡೆದು ಹೋಗಿರುವ ಹಾಗೂ ಹೊಂಡ-ಗುಂಡಿಗಳಿಂದ ಕೂಡಿದ ಕೆಸರುಮಯ ರಸ್ತೆಗಳ ಮೇಲೆಯೇ ಮಳೆಗಾಲದಲ್ಲಿ ಸಂಚರಿಸುವುದೇ ಸವಾಲಾಗಿವೆ. ಈ ಸಂಬಂಧ ಈಗಾಗಲೇ ಹಲವು ಬಾರಿ ನಾಗರಿಕರು ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಬಿಬಿಎಂಪಿ, ಜಲಮಂಡಳಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಹೀಗಾಗಿ, ನಿವಾಸಿ ಕಲ್ಯಾಣ ಸಂಘವೂ ಲೇಔಟ್ ನಿರ್ವಹಣಾ ನಿಧಿಯಿಂದ ರಸ್ತೆಗಳನ್ನು ಸರಿಪಡಿಸಲು ಮುಂದಾಗಿದೆ.
ಪ್ರತಿ ಮಳೆ, ಪ್ರದೇಶವನ್ನು ಪ್ರವಾಹದಿಂದ ರಕ್ಷಿಸಿಕೊಳ್ಳಲು ನಿವಾಸಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವರ್ಸೋವಾ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ (ವಿಎಲ್‌ಆರ್‌ಡಬ್ಲ್ಯುಎ) ಸದಸ್ಯ ಶಿವ ರೆಡ್ಡಿ, ನಾವು ನೀರು ಬರದಂತೆ ಫ್ಲಡ್‌ಗೇಟ್‌ಗಳನ್ನು ಸಹ ಅಳವಡಿಸಿದ್ದೇವೆ. ಈಗ, ಮಳೆಗಾಲ ಸಮಯದಲ್ಲಿ ಲೇಔಟ್‌ಗೆ ಕೊಳಕು, ತ್ಯಾಜ್ಯ ಕೂಡ ಒಯ್ಯುತ್ತದೆ. ಅಲ್ಲದೆ, ಸುಮಾರು ೧೫ ವರ್ಷಗಳ ಹಿಂದೆ ರಸ್ತೆಗೆ ಶಂಕುಸ್ಥಾಪನೆ ಮಾಡಲಾಗಿದ್ದು, ಅಂದಿನಿಂದ ಇಲ್ಲಿಯವರೆಗೆ ಯಾವುದೇ ದುರಸ್ತಿ ಅಥವಾ ಡಾಂಬರು ಕಂಡಿಲ್ಲ ಎಂದು ಹೇಳಿದರು.
ಬಡಾವಣೆಯ ಮತ್ತೋರ್ವ ನಿವಾಸಿ ಅರುಣಾ ರೆಡ್ಡಿ ಮಾತನಾಡಿ, ಬಿಬಿಎಂಪಿ ಅಧಿಕಾರಿಗಳು ಬಡಾವಣೆಗೆ ಬರುತ್ತಲೇ ಇದ್ದಾರೆ, ಪ್ರತಿ ಬಾರಿಯೂ ಎಂಜಿನಿಯರ್‌ಗಳು ತಪಾಸಣೆ ಅಥವಾ ಇನ್ನಾವುದೇ ಕೆಲಸಕ್ಕಾಗಿ ಭೇಟಿ ನೀಡಿದಾಗ ರಸ್ತೆಗಾಗಿ ಕೇಳುತ್ತೇವೆ.
ಸರಕಾರದಿಂದ ಕಾಂಕ್ರೀಟ್ ರಸ್ತೆ ಮಂಜೂರಾಗಿದ್ದು, ಕಾಮಗಾರಿ ಆದೇಶ ಬಂದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂಬ ಹಾರಿಕೆ ಉತ್ತರ ಮಾತ್ರ ನಮಗೆ ಸಿಗುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಸುಮಾರು ೮೦ ಪ್ರತಿಶತ ನಿವಾಸಿಗಳು, ಹಿರಿಯ ನಾಗರಿಕರು ತಮ್ಮ ನಿವೃತ್ತಿ ಜೀವನವನ್ನು ಸುಖಕರವಾಗಿ ಬದುಕಲು ಬಯಸುತ್ತಾರೆ. ಆದರೆ ಈ ರಸ್ತೆಗಳ ಸ್ಥಿತಿಯನ್ನು ನೋಡಿದರೆ, ಅವರು ಆರಾಮವಾಗಿ ನಡೆಯಲು ಸಹ ಸಾಧ್ಯವಿಲ್ಲ. ಅವರಲ್ಲಿ ಕೆಲವರು ಬಿದ್ದು ಗಾಯವೊಂಡಿರುವ ಘಟನೆಗಳು ವರದಿಯಾಗಿವೆ ಎಂದು ನಿವಾಸಿ ಮಹೇಶ್ ಕುಮಾರ್ ಹೇಳಿದರು.