ಸ್ಲಂ ನಿವಾಸಿಗಳಿಗೆ ಅತಿ ಶೀಘ್ರವೆ ಮನೆ ಮನೆಗೆ ಹಕ್ಕುಪತ್ರ ವಿತರಣೆ

ಜೋಪಡಿ ಮುಕ್ತ ಯೋಜನೆಯಡಿ ನಗರ ಕ್ಷೇತ್ರಕ್ಕೆ ೬೫೦೦ ಮನೆ ಮಂಜೂರು
ರಾಯಚೂರು.ಆ.೦೧- ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಗುಡಿಸಲು ಮುಕ್ತಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕೈಗೊಂಡ ವಸತಿ ಯೋಜನೆಗಳ ಅಡಿಯಲ್ಲಿ ನಗರ ಕ್ಷೇತ್ರಕ್ಕೆ ಒಟ್ಟು ೬೫೦೦ ಮನೆಗಳು ಮಂಜೂರಾಗಿದ್ದು, ಹೆಚ್ಚುವರಿಯಾಗಿ ವಸತಿ ಸಚಿವರಾದ ಸೋಮಣ್ಣ ಅವರು ೧೩೦೦ ಮನೆಗಳು ನೀಡಿದ್ದು ಹಂತ ಹಂತವಾಗಿ ಎಲ್ಲರಿಗೂ ಮನೆಗಳನ್ನು ನೀಡುವ ಮೂಲಕ ಗುಡಿಸಲು ಮುಕ್ತಗೊಳಿಸಲಾಗುತ್ತದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.
ಅವರಿಂದು ವಾರ್ಡ್ ೧೯ ರಲ್ಲಿ ೨೦೦ ಮನೆಗಳಿಗೆ ಭೂಮಿ ಪೂಜೆ ಮಾಡಿ, ಮಾತನಾಡಿದರು. ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ಪ್ರಸ್ತುತ ೫ ಸಾವಿರ ಮನೆಗಳು ಕ್ಷೇತ್ರಕ್ಕೆ ಮಂಜೂರಿ ಮಾಡಲಾಗಿದೆ. ಇದರಲ್ಲಿ ೨೭೪೩ ಮನೆಗಳು ಕೊಳಚೆ ನಿರ್ಮೂಲನಾ ಪ್ರದೇಶಗಳ ಜನರಿಗಾಗಿ ನೀಡಲಾಗಿದೆ. ೩೦೦ ಮನೆಗಳು ಆಶ್ರಯ ಯೋಜನೆಯಡಿ ಹಾಗೂ ೨೪೦೦ ಮನೆಗಳು ವಸತಿ ರಹಿತರಿಗೆ ಕಡಿಮೆ ವೆಚ್ಚದಲ್ಲಿ ನಿರ್ಮಿಸಿಕೊಡುವ ಉದ್ದೇಶ ಹೊಂದಲಾಗಿದೆ. ನಮ್ಮ ಸರ್ಕಾರ ಬಂದ ನಂತರ ವಸತಿ ಹೀನರು ಮತ್ತು ಜೋಪಡಿ ರಹಿತ ಆಂದೋಲನಕ್ಕೆ ಈ ಮನೆಗಳನ್ನು ಬಳಸಲಾಗುತ್ತದೆ.
ಗ್ರಾಮಾಂತರ ಪ್ರದೇಶಕ್ಕೆ ೧೫೦೦ ಮನೆಗಳನ್ನು ನೀಡಲಾಗಿದೆ. ಕ್ಷೇತ್ರದ ಗ್ರಾಮೀಣ ಭಾಗದ ಪಂಚಾಯತಿಗಳಿಗೆ ೪೦ ರಂತೆ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ೧೦೫೦ ನಿವೇಶನಗಳಿಗೆ ಶೀಘ್ರವೆ ಹಕ್ಕುಪತ್ರ ನೀಡಲಾಗುತ್ತದೆ. ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲಾಗುತ್ತದೆಂದು ಹೇಳಿದ ಅವರು, ಈ ಕಾರ್ಯ ಶೀಘ್ರವಾಗಿ ಕೈಗೊಳ್ಳಬೇಕಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ವಿಳಂಬವಾಗಿದೆಂದು ಹೇಳಿದ ಅವರು, ಶೀಘ್ರವೆ ಮನೆ ಮನೆಗೆ ಹಕ್ಕುಪತ್ರ ತಲುಪಿಸಲಾಗುತ್ತದೆಂದು ಹೇಳಿದ ಅವರು, ಬುಡಗ ಜನಾಂಗ, ಅಲೆಮಾರಿ ಹಾಗೂ ಇನ್ನಿತರ ಜನಾಂಗಗಳಿಗೆ ಜಮೀನು ಮಂಜೂರಿ ಮಾಡುವ ಮೂಲಕ ಅವರ ವಸತಿ ಸಮಸ್ಯೆ ನಿವಾರಿಸಲಾಗುತ್ತದೆಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಳ ಆಂಜಿನೇಯ್ಯ, ರವೀಂದ್ರ ಜಲ್ದಾರ್, ಕಡಗೋಳ ಆಂಜಿನೇಯ್ಯ, ಎನ್.ಕೆ.ನಾಗರಾಜ, ಪಿ.ಯಲ್ಲಪ್ಪ, ಆಂಜಿನೇಯ್ಯ, ರಾಮು ಗಿಲ್ಲೇರಿ, ಎಸ್.ರಾಜು, ರೆಡ್ಡಿ ತಿಮ್ಮಪ್ಪ, ಬೂದೆಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.