ಸ್ಯೂಯೆಜ್ ಕಾಲುವೆಯಲ್ಲಿ ಸಿಲುಕಿದ ಕಂಟೈನರ್ ಶಿಪ್

ಕೈರೋ, ಮಾ.೨೪- ವಿಶ್ವದ ಅತೀ ಪ್ರಸಿದ್ದ ವ್ಯಾಪಾರ ಜಲಸಂಧಿಗಳಲ್ಲಿ ಒಂದಾಗಿರುವ ಸ್ಯೂಯೆಜ್ ಕಾಲುವೆಯಲ್ಲಿ ಬೃಹತ್ ಕಂಟೈನರ್ ಶಿಪ್‌ವೊಂದು ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿ ಸಿಲುಕಿ ಹಾಕಿಕೊಂಡ ಘಟನೆ ಮಂಗಳವಾರ ನಡೆದಿದ್ದು, ಘಟನೆ ಪರಿಣಾಮ ಕಾಲುವೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸದ್ಯ ಸಿಲುಕಿಕೊಂಡಿರುವ ಕಂಟೈನರ್ ಶಿಪ್‌ನ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಬಹುಷಃ ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಸ್ಯೂಯೆಜ್ ಕಾಲುವೆಯ ಉತ್ತರ ಭಾಗದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಟಗ್ ಬೋಟ್‌ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸುಮಾರು ೪೦೦ ಮೀ. ಉದ್ದ ಹಾಗೂ ೫೯ ಮೀ. ಅಗಲವಿರುವ ?ಎವರ್‌ಗ್ರೀನ್ ಮರೀನ್? ಹೆಸರಿನ ಈ ಬೃಹತ್ ಕಂಟೈನರ್‌ನ ತೆರವುಗೊಳಿಸಲು ಇನ್ನೂ ಕೆಲವು ದಿನಗಳ ಹಿಡಿಯಬಹುದೆಂದು ಕೆಲವರು ಅಂದಾಜಿಸಿದ್ದಾರೆ. ಸದ್ಯ ಕಂಟೈನರ್ ಶಿಪ್ ಸಿಲುಕೊಂಡಿರುವ ಹಿನ್ನೆಲೆಯಲ್ಲಿ ಇತರೆ ಶಿಪ್‌ಗಳ ಪ್ರಯಾಣಕ್ಕೆ ಅನಾನುಕೂಲವಾಗಿದ್ದು, ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಬ್ಲಾಕ್ ಆಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.