ಸ್ಯಾನಿಟೈಸೇಶನ್ ವರದಿ ಕೊಡಿ- ಅಬ್ಬಯ್ಯ

ಹುಬ್ಬಳ್ಳಿ,ಜೂ6: ಕೋವಿಡ್-19 ಸಮರ್ಪಕ ನಿರ್ವಹಣೆಗಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಹಾಗೂ ಈಗಾಗಲೇ ಸ್ಯಾನಿಟೈಸೇಶನ್ ಮಾಡಿರುವ ಹಾಗೂ ಮಾಡಬೇಕಿರುವ ವಾರ್ಡುವಾರು ಮಾಹಿತಿಯುಳ್ಳ ಸಮಗ್ರ ವರದಿಯನ್ನು 2 ದಿನದಲ್ಲಿ ಸಲ್ಲಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಶನಿವಾರ ಹು-ಧಾ ಮಹಾನಗರ ಪಾಲಿಕೆ ಆವರಣದಲ್ಲಿನ ಶಾಸಕರ ಕಚೇರಿಯಲ್ಲಿ ನಡೆದ ಕೋವಿಡ್-19 ನಿರ್ವಹಣೆ ಕುರಿತ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕರು, ಕೊರೋನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಕಾಲನಿಗಳ ಸ್ವಚ್ಛತೆ ಹಾಗೂ ಜನರ ಆರೋಗ್ಯ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದರು.
ಕೋವಿಡ್-19 ಸಮರ್ಪಕ ನಿರ್ವಹಣೆಗಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಕ್ಷೇತ್ರದಲ್ಲಿ ಗಟಾರ ಸ್ವಚ್ಛತೆ, ಸ್ಯಾನಿಟೈಸೇಶನ್, ಫಾಗಿಂಗ್ ಸೇರಿದಂತೆ ಜನರ ಆರೋಗ್ಯ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳ ಬಗ್ಗೆ 2 ದಿನದಲ್ಲಿ ಸಮಗ್ರ ವರದಿ ನೀಡಬೇಕು. ಅಲ್ಲದೇ, ಸ್ಯಾನಿಟೈಸೇಶನ್, ಗಟಾರ ಸ್ವಚ್ಛತೆ ಸೇರಿದಂತೆ ಪ್ರತಿದಿನ ತಮ್ಮ ವಲಯ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕೆಲಸದ ಬಗ್ಗೆ ನಿತ್ಯ ವ್ಯಾಟ್ಸಪ್ ಮೂಲಕ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಪ್ರಸ್ತುತ ಮಳೆಗಾಲ ಆರಂಭವಾಗುತ್ತಿದ್ದು, ಕ್ಷೇತ್ರದಲ್ಲಿನ ನಾಲಾ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ಜನರ ಆರೋಗ್ಯ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಪ್ರತಿನಿತ್ಯ ಕಾಲನಿಗಳಲ್ಲಿ ಫಾಗಿಂಗ್ ಸಿಂಪಡಣೆ, ಗಟಾರ ಸ್ವಚ್ಛತೆ, ಕಸದ ಸಮರ್ಪಕ ವಿಲೇವಾರಿಗೆ ಆದ್ಯತೆ ನೀಡಬೇಕು. ಕೊರೋನಾ ಹಿನ್ನೆಲೆಯಲ್ಲಿ ಅಧಿಕಾರಿಗಳು ತಮ್ಮ ಸ್ವಂತ ಆರೋಗ್ಯ ಕಾಳಜಿ ಜೊತೆಗೆ ಜನರ ಆರೋಗ್ಯದ ಬಗ್ಗೆಯೂ ವಿಶೇಷ ಆಸಕ್ತಿ ತೋರಿ ಕಾರ್ಯನಿರ್ವಹಿಸಬೇಕು. ಇದಕ್ಕೆ ಎಲ್ಲ ರೀತಿಯಲ್ಲೂ ಸಹಕಾರ ನೀಡುವುದಾಗಿ ತಿಳಿಸಿದರು.
ಪಾಲಿಕೆ ಅಧೀಕ್ಷಕ ಇಂಜಿನಿಯರ್ ಮಂಜುನಾಥ ಚವ್ಹಾಣ್, ವಲಯ ಅಧಿಕಾರಿಗಳಾದ ಬಸವರಾಜ ಲಮಾಣಿ, ಆನಂದ ಕಾಂಬ್ಳೆ, ಸಿದ್ದಗೊಂಡ, ತಿರುಪತಿ, ರಿಯಾಜ್, ನದಾಫ್, ಸುನಂದಾ ಚಿಕ್ಕಮಠ, ಇತರರು ಇದ್ದರು.