ಸ್ಯಾನಿಟೈಸರ್ ಸಿಂಪಡಣೆ: ಪರಿಶೀಲನೆ


ಬ್ಯಾಡಗಿ,ಮೇ.14: ಕೊರೋನಾ ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಹೆಚ್ಚು ಜಾಗೃತರಾಗಿ ಸರ್ಕಾರದ ನೀತಿ, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್. ತಿಮ್ಮಾರೆಡ್ಡಿ ಮನವಿ ಮಾಡಿದರು.
ತಾಲೂಕಿನ ಬುಡುಪನಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಛತ್ರ ಗ್ರಾಮದಲ್ಲಿ ಗುರುವಾರ ಕೋವಿಡ್ ಸೋಂಕು ಹರಡದಂತೆ ಗ್ರಾಪಂ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ಕೈಗೊಂಡಿರುವ ಸ್ಯಾನಿಟೈಸರ್ ಸಿಂಪರಣೆ ಕಾರ್ಯವನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು ತಾಲೂಕಿನಾದ್ಯಂತ ಪ್ರತಿಯೊಂದು ಗ್ರಾಮದಲ್ಲೂ ಸ್ಯಾನಿಟೇಷನ್ ಮಾಡಲು ಕ್ರಮ ವಹಿಸಿದ್ದು, ತಾಲೂಕಿನ 21 ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ತಾಲೂಕ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಪಂಗಳಲ್ಲಿ ಕೊರೋನಾ ನಿಗ್ರಹಕ್ಕೆ ವಿಶೇಷ ಕಾರ್ಯಪಡೆ ರಚನೆ ಮಾಡಿ ಪ್ರತಿ ಹಳ್ಳಿಗಳಲ್ಲಿ ಕೊರೋನಾ ತಡೆಗಟ್ಟಲು ಜಾಗೃತಿ ಮೂಡಿಸುವ ಜೊತೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮಗಳಲ್ಲಿ ಔಷಧ ಸಿಂಪಡಿಸುವುದು, ಸೋಂಕಿತರು ಮೃತಪಟ್ಟರೆ ಅಂತ್ಯಕ್ರಿಯೆ ಮಾಡಲು ಪಂಚಾಯ್ತಿಯಿಂದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಪ್ರಕಾಶ ಹುಣಸೆಕಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.