ಸ್ಯಾಟ್‌ಲೈಟ್ ಫೋನ್ ಬಳಕೆ ಕಟ್ಟೆಚ್ಚರ; ಅರಗ


ಬೆಂಗಳೂರು, ಸೆ. ೨೧- ರಾಜ್ಯದಲ್ಲಿ ಸ್ಯಾಟ್‌ಲೈಟ್ ಫೋನ್‌ಗಳ ಬಳಕೆ ಬಗ್ಗೆ ನಿಗಾ ವಹಿಸಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನಸಭೆಯಲ್ಲಿಂದು ಹೇಳಿದರು.
ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಯು.ಟಿ. ಖಾದರ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ರಾಜ್ಯದ ಕೆಲವೆಡೆ ಸ್ಯಾಟ್‌ಲೈಟ್ ಫೋನ್‌ಗಳ ಬಳಕೆ ಬಗ್ಗೆ ಮಾಹಿತಿಗಳು ಬಂದಿವೆ. ಈ ಮಾಹಿತಿಗಳನ್ನು ಕೇಂದ್ರ ಸರ್ಕಾರದ ರಾ ಸಂಸ್ಥೆ ಮತ್ತು ಐಬಿಯೊಂದಿಗೆ ಹಂಚಿಕೊಂಡಿದ್ದೇವೆ ಎಂದರು.
ರಾಜ್ಯದಲ್ಲಿ ೨೦೨೦ ರಲ್ಲಿ ೨೫೦ ಕಡೆ ಸ್ಯಾಟ್‌ಲೈಟ್ ಫೋನ್‌ಗಳನ್ನು ಬಳಸಲಾಗಿದೆ. ೨೦೨೧ರಲ್ಲಿ ೨೨೦ ಕಡೆ ಸ್ಯಾಟ್‌ಲೈಟ್ ಫೋನ್‌ಗಳನ್ನು ಬಳಸಿರುವ ಮಾಹಿತಿ ಇದೆ ಎಂದರು.
ಈ ಸ್ಯಾಟ್‌ಲೈಟ್ ಫೋನ್ ಬಳಕೆ ವಿಚಾರ ಸೂಕ್ಷ್ಮವಾಗಿದ್ದು, ದೇಶದ ಭದ್ರತೆಗೆ ಸಂಬಂಧಿಸಿದ್ದದ್ದಾರಿಂದ ಈ ಬಗ್ಗೆ ಹೆಚ್ಚು ಮಾತನಾಡಲು ಆಗಲ್ಲ ಎಂದು ಅವರು ತಿಳಿಸಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ್ದ ಯು.ಟಿ. ಖಾದರ್ ಅವರು, ಕರಾವಳಿ ಮತ್ತು ಮಂಗಳೂರು ಭಾಗದಲ್ಲಿ ಸ್ಯಾಟ್‌ಲೈಟ್ ಫೋನ್ ಬಳಕೆಯಾಗುತ್ತಿರುವ ವರದಿಗಳು ಬಂದಿವೆ. ಆ ಭಾಗದಲ್ಲಿ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ ಈ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದರು.