ಸ್ಯಾಂಡಲ್ ವುಡ್ ನಲ್ಲಿ ನಶೆ ನಂಟು: ಶರ್ಮಿಳಾ ಮಾಂಡ್ರೆಯತ್ತ ಸಿಸಿಬಿ ಕಣ್ಣು?

ಬೆಂಗಳೂರು, ಸೆ 15- ಸ್ಯಾಂಡಲ್ ವುಡ್‍ ನಲ್ಲಿ ನಶೆ ನಂಟು ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ, ಆರೋಪಿ ಆದಿತ್ಯ ಆಳ್ವಾ ರೆಸಾರ್ಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಏಪ್ರಿಲ್ 4ರಂದು ಇದೇ ರೆಸಾರ್ಟ್ ನಲ್ಲಿ ನಡೆದಿದ್ದ ಪಾರ್ಟಿ ಹಾಗೂ ಅಂದು ನಡೆದಿದ್ದ ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಮಹತ್ವದ ತಿರುವು ಸಿಕ್ಕಿದೆ.

ನಶೆಯ ನಂಟು ಎಲ್ಲೆಡೆ ವಿಸ್ತರಿಸಿದ್ದು, ನಟಿಯರು, ಕೆಲ ರಾಜಕಾರಣಿಗಳ ಮಕ್ಕಳು, ಉದ್ಯಮಿಗಳ ಪಾತ್ರ ದಟ್ಟವಾಗುತ್ತಿದೆ. ಡ್ರಗ್ಸ್ ದಂಧೆ ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್‍ ಶರ್ಮಿಳಾ ಮಾಂಡ್ರೆ ಹೆಸರು ಪ್ರಸ್ತಾಪಿಸಿದ್ದರು.

ಸಿಸಿಬಿ ಅಧಿಕಾರಿಗಳು ಮಂಗಳವಾರ ‘ಹೌಸ್ ಆಫ್ ಲೈಫ್’ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದು, ಆದಿತ್ಯ ಆಳ್ವಾನ ಈ ಅಡ್ಡೆಯಲ್ಲಿಯೇ ಭರ್ಜಿ ಪಾರ್ಟಿಗಳು ನಡೆಯುತ್ತಿದ್ದವು. ಲಾಕ್ ಡೌನ್ ಜಾರಿಯಿದ್ದ ಏಪ್ರಿಲ್ 4ರಂದು ನಟಿ ಶರ್ಮಿಳಾ ಮಾಂಡ್ರೆ ಇಲ್ಲಿನ ಪಾರ್ಟಿಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದಾಗ ಕಾರು ಅಪಘಾತವಾಗಿತ್ತು.

ಅಂದು ಆಕೆಯ ಜತೆ ಆದಿತ್ಯ ಆಳ್ವಾ ಸಹ ಇದ್ದರು, ಪಾರ್ಟಿ ಮುಗಿಸಿದ ಬಳಿಕ ಆದಿತ್ಯ ಮನೆಗೆ ಶರ್ಮಿಳಾ ಮಾಂಡ್ರೆ ತೆರಳಿದ್ದರು ಎನ್ನಲಾಗಿದೆ.

ಈ ಎಲ್ಲ ಲಿಂಕ್ ಹಿನ್ನೆಲೆಯಲ್ಲಿ ಡ್ರಗ್ಸ್ ಪ್ರಕರಣದ ಆರೋಪಿ ಆದಿತ್ಯ ಆಳ್ವಾ ಜತೆಗಿದ್ದ ನಟಿ ಶರ್ಮಿಳಾ ಮಾಂಡ್ರೆಯವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸುವ ಸಾಧ್ಯತೆಯಿದೆ.

ಆದಿತ್ಯ ಆಳ್ವಾ ಒಡೆತನದ ಹೌಸ್ ಆಫ್ ಲೈಫ್ 4 ಎಕರೆ ವಿಸ್ತೀರ್ಣದಲ್ಲಿದ್ದು, ಟ್ರೇಡ್ ಪರವಾನಗಿ ಕಾರ್ತಿಕ್ ಎಂಬುವರ ಹೆಸರಲ್ಲಿದ್ದು, 2018ರಲ್ಲಿಯೇ ಅವಧಿ ಮುಕ್ತಾಯವಾಗಿದೆ. ಆದಾಗ್ಯೂ ನಿತ್ಯ ಪಾರ್ಟಿಗಳು ನಡೆಯುತ್ತಿತ್ತು, ಭಾಗವಹಿಸಿದ ಮಂದಿ ನಶೆಯ ಗುಂಗಿನಲಲ್ಲಿ ತೇಲುತ್ತಿದ್ದರು ಎಂದು ತಿಳಿದುಬಂದಿದೆ.
ಇಂದ್ರಜಿತ್ ಲಂಕೇಶ್ ಅವರಲ್ಲದೆ, ಇತ್ತೀಚೆಗೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿಯವರೂ ಸಹ ದಿವಂಗತ ರಾಜಕಾರಣಿ ಜೀವರಾಜ್ ಆಳ್ವಾ ಕುಟುಂಬಕ್ಕೂ, ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೂ ಸಂಬಂಧವಿದೆ ಎಂದು ಹೇಳಿಕೆ ನೀಡಿದ್ದರು.