
ಬೆಂಗಳೂರು, ಜ. ೧೦- ಬಹುಭಾಷೆ ಸಿನಿಮಾಗಳಲ್ಲಿ ಇಷ್ಟು ದಿನ ತಮ್ಮ ಧ್ವನಿಯಿಂದ ಚಿರಪರಿಚಿತರಾಗಿದ್ದ ಗಾಯಕಿ ಮಂಗ್ಲಿ ಇದೀಗ ನಾಯಕಿಯಾಗಿ ಬಡ್ತಿ ಪಡೆಯುತ್ತಿದ್ದಾರೆ.
ಹೌದು ಗಾಯಕಿ ಮಂಗ್ಲಿ ಚಂದನವನದಲ್ಲಿ ನಾಯಕಿಯಾಗಿ ಪಾದರ್ಪಣೆ ಮಾಡುತ್ತಿರುವುದು ವಿಶೇಷ.ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹೇಳಿರುವ ಮಂಗ್ಲಿ,ನಾಯಕಿಯಾಗಿ ಬಣ್ಣ ಹಚ್ಚಲು ಸಿದ್ದರಾಗಿದ್ದಾರೆ. ಗಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಈ ಗಾಯಕಿ, ಮೊದಲ ಬಾರಿಗೆ ನಾಯಕಿಯಾಗಿ ಪ್ರವೇಶ ಮಾಡುತ್ತಿದ್ದಾರೆ. ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ನಿರ್ದೇಶನದಲ್ಲಿ ಮೂಡಿ ಬರಲಿರುವ ಪಾದರಾಯ ಚಿತ್ರಕ್ಕೆ ಇವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಸದ್ಯ ವೇದ ಸಿನಿಮಾದ ‘ಗಿಲ್ಲಕ್ಕೋ’ ಹಾಡಿನ ಮೂಲಕ ಮನೆಮಾತಾಗಿರುವ ಮಂಗ್ಲಿ, ತ್ರಿಬಲ್ ರೈಡಿಂಗ್, ವಿಕ್ರಾಂತ್ ರೋಣ, ದಿಪ್ ಪಸಂದ್, ರಾಬರ್ಟ್ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳ ಹಾಡಿಗೆ ದನಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ನಾಯಕಿಯಾಗಿ ನಟಿಸುತ್ತಿದ್ದು, ನಾಗಶೇಖರ್ ಈ ಸಿನಿಮಾದ ನಾಯಕ.
ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದು, ೨೦೧೩-೧೪ರಲ್ಲಿ ನಡೆದ ಘಟನೆಯನ್ನು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಚಿತ್ರ ತಯಾರಿ ಮಾಡಲು ಮುಂದಾಗಿದ್ದಾರೆ. ಈ ಘಟನೆಯು ಆರು ರಾಜ್ಯಗಳಿಗೆ ಸಂಬಂಧಿಸಿದ್ದಾಗಿದ್ದು, ಅದನ್ನು ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿರುವ ಅವರು, ಈ ಚಿತ್ರಕ್ಕೆ ಪಾದರಾಯ ಎಂದು ಹೆಸರಿಡುವುದಕ್ಕೂ ಕಾರಣವಿದೆಯಂತೆ ಎಂದು ಕುತುಹಲ ಮೂಡಿಸಿದ್ದಾರೆ.