ಸ್ಯಾಂಟ್ರೋ ರವಿ ವಿರುದ್ಧ ಕ್ರಮಕ್ಕೆ ಡಿಕೆಶಿ ಆಗ್ರಹ

ಬೆಂಗಳೂರು, ಜ. ೯- ಸ್ಯಾಂಟ್ರೋ ರವಿಯ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಆದರೆ, ಆ ಕೆಲಸ ಆಗುತ್ತಿಲ್ಲ. ಸ್ಯಾಂಟ್ರೋ ರವಿ ರಕ್ಷಣೆ ಕೆಲಸವನ್ನು ಬಿಜೆಪಿ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಕನಕಪುರದ ಜೆಡಿಎಸ್ ಮುಖಂಡ ಡಿ.ಎಂ. ವಿಶ್ವನಾಥ್ ಸೇರಿದಂತೆ ವಿವಿಧ ಮುಖಂಡರುಗಳ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ ತಾನು ಹೇಳಿದಂತೆ ಕೇಳಲಿಲ್ಲ ಎಂಬ ಕಾರಣಕ್ಕೆ ದಲಿತ ಹೆಣ್ಣು ಮಗಳ ವಿರುದ್ಧ ಬೋಗಸ್ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ ಎಂಬ ವರದಿಗಳನ್ನು ಗಮನಿಸಿದ್ದೇನೆ. ಮಾಧ್ಯಮಗಳು ಸ್ಯಾಂಟ್ರೋ ರವಿಗೂ ಬಿಜೆಪಿಯವರಿಗೂ ಇರುವ ಸಂಬಂಧವನ್ನು ಜಗಜ್ಜಾಹೀರು ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಲ್ಲವನ್ನು ಹೇಳಿದ್ದಾರೆ. ಇಷ್ಟಾದರೂ ಅವರ ವಿರುದ್ಧ ಕ್ರಮ ಆಗುತ್ತಿಲ್ಲ. ಬಿಜೆಪಿ, ಸ್ಯಾಂಟ್ರೋ ರವಿ ರಕ್ಷಣೆಗೆ ನಿಂತಿದೆ ಎಂದು ದೂರಿದರು.
ಯಾರ ವಿರುದ್ಧ ಆರೋಪ ಬಂದಾಗ ಪಾರದರ್ಶಕವಾದ ತನಿಖೆ ಆಗಬೇಕು. ಆಗ ಸತ್ಯ ಹೊರಬರುತ್ತದೆ. ಯಾರೂ ಸುಮ್ಮ ಸುಮ್ಮೆ ಯಾರ ಜತೆಯೂ ಚಾಟ್ ಮಾಡಲ್ಲ, ಯಾರ ಜತೆಯೂ ಮಾತನಾಡುವುದೂ ಇಲ್ಲ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಕೆಲ ಸಚಿವರುಗಳು ಸ್ಯಾಂಟ್ರೋ ರವಿ ಜತೆ ಚಾಟ್ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದರು.
ಸಿದ್ಧರಾಮಯ್ಯನವರ ಹಿಂದೂತ್ವ ವಿರೋಧಿ ಧೋರಣೆ ಕುರಿತು ಬಿಜೆಪಿ ಸಿದ್ಧು ನಿಜ ಕನಸುಗಳ ಪುಸ್ತಕ ಬಿಡುಗಡೆ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ನಾಯಕರ ಮೇಲೆ ಕಳಂಕ ತರಲು ಈ ರೀತಿ ಮಾಡುತ್ತಿದ್ದಾರೆ. ಬಿಜೆಪಿಯ ಅಜೆಂಡಾ ಏನೆಂಬುದು ಗೊತ್ತಿದೆ. ಟಿಪ್ಪು ಇತಿಹಾಸ ಕಾಂಗ್ರೆಸ್ ನಾಯಕರು ಬರೆದಿದ್ದಾರೆ ಚರ್ಚೆಗೆ ಬರಲಿ ಚರ್ಚೆಗೆ ಸಿದ್ಧ ಎಂದರು.

ಕನಕಪುರದ ಜೆಡಿಎಸ್ ಮುಖಂಡ ಡಿ.ಎಂ. ವಿಶ್ವನಾಥ್ ಸೇರಿದಂತೆ ಹಲವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿಂದು ಕಾಂಗ್ರೆಸ್ ಗೆ ಸೇರ್ಪಡೆಯಾದರು.

ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಬಿಜೆಪಿ ಏನೆನೋ ಮಾಡುತ್ತಿದೆ. ಕಾಂಗ್ರೆಸ್‌ನವರು ಹಿಂದೂ ವಿರೋಧಿ ಎನ್ನುವ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ೩೦೦ ಕ್ಕೂಹೆಚ್ಚು ದೇವಸ್ಥಾನಗಳನ್ನು ಕಟ್ಟಿಸಿದ್ದೇನೆ. ಆ ಬಗ್ಗೆ ಬಿಜೆಪಿಯ ಯಾರೂ ಮಾತನಾಡಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಮನಗರದಲ್ಲಿ ರಾಮಮಂದಿರ, ಶ್ರೀರಂಗಪಟ್ಟಣದಲ್ಲಿ ಹುನುಮ ಮಂದಿರ ನಿರ್ಮಾಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಮಗನರ ಕ್ಲೀನ್ ಮಾಡುತ್ತವೆ ಎಂದು ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ ಹೇಳಿದ್ದಾರೆ. ಮೊದಲು ಏನು ಕ್ಲೀನ್ ಮಾಡುತ್ತಾರೋ ಹೇಳಲಿ. ಒಂದು ಲೋಡ್ ಕಸ ಪೊರಕೆ ಕಳುಹಿಸುತ್ತೇನೆ ಎಂದು ವ್ಯಂಗ್ಯವಾಡಿದರು.
ಇಂದು ಕಾಂಗ್ರೆಸ್‌ಗೆ ಹಲವು ಮುಖಂಡರು ಸೇರ್ಪಡೆಯಾಗುತ್ತಿದ್ದಾರೆ. ಅವರಿಗೆಲ್ಲಾ ಸ್ವಾಗತ ಮಾಡುತ್ತೇನೆ. ಕನಕಪುರ ಡಿ.ಎಂ. ವಿಶ್ವನಾಥ್ ಅವರು ಈ ಹಿಂದೆ ನನ್ನ ವಿರುದ್ಧ ೭ ಸಾವಿರ ಮತಗಳ ಅಂತರದಿಂದ ಸೋತಿದ್ದರು ವಿಶ್ವನಾಥ್ ಅವರ ತಂದೆ ಮತ್ತು ತಾತ ನನ್ನ ಪರ ಚುನಾವಣೆಯಲ್ಲಿ ಕೆಲಸ ಮಾಡಿದ್ದರು ಎಂದು ನೆನಪಿಸಿಕೊಂಡು ಡಿ.ಕೆ. ಶಿವಕುಮಾರ್, ಎಲ್ಲರೂ ಸೇರಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡೋಣ ಎಂದರು.
ಜ.೧೭: ಮಹಿಳಾ ಸಮಾವೇಶ
ಕಾಂಗ್ರೆಸ್ ಪಕ್ಷದಿಂದ ಮಹಿಳಾ ಸಮಾವೇಶವನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ ಜ. ೧೭ ರಂದು ಈ ಮಹಿಳಾ ಸಮಾವೇಶ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕ ಗಾಂಧಿ ಸಮಾವೇಶದಲ್ಲಿ ಭಾಗಿಯಾಗುತ್ತಾರೆ ಎಂದರು.