ಸ್ಯಾಂಟ್ರೊ ರವಿ ಬಂಧನಕ್ಕೆ ವಿಶೇಷ ತಂಡ

ಮೈಸೂರು,ಜ.೮-ಯುವತಿಯರನ್ನು ನಂಬಿಸಿ ಮೋಸ ಮಾಡಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಾ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿ ಸ್ಯಾಂಟ್ರೋ ರವಿ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ತೀವ್ರ ಶೋಧ ನಡೆಸಿದ್ದಾರೆ. ಪ್ರಕರಣ ದಾಖಲಾಗಿ ೬ ದಿನ ಕಳೆದರೂ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ಪತ್ತೆಯಾಗಿಲ್ಲ. ಜನವರಿ ೨ರಂದು ಸ್ಯಾಂಟ್ರೋ ರವಿ ವಿರುದ್ಧ ವಂಚನೆ, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಜಾತಿನಿಂದನೆ ಆರೋಪದಡಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿಸಿಪಿ ಮುತ್ತುರಾಜ್ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಎನ್‌ಆರ್ ಉಪವಿಭಾಗದ ಎಸಿಪಿ ಶಿವಶಂಕರ್ ನೇತೃತ್ವದ ತಂಡದಿಂದ ಶೋಧ ನಡೆಯುತ್ತಿದೆ. ಬೆಂಗಳೂರು, ಮೈಸೂರಿನಲ್ಲಿ ಸ್ಯಾಂಟ್ರೋ ರವಿಗಾಗಿ ವಿಶೇಷ ತಂಡ ಶೋಧ ಕಾರ್ಯ ನಡೆಸುತ್ತಿದೆ. ಈ ನಡುವೆ ಸ್ಯಾಂಟ್ರೋ ರವಿ ಅತ್ಯಾಚಾರ ಎಸೆಗಿ ಮದುವೆಯಾಗಿದ್ದ ಸಂತ್ರಸ್ತೆ ನ್ಯಾಯಾಧೀಶರ ಮುಂದೆ ೧೬೪ ಹೇಳಿಕೆ ದಾಖಲಿಸಿದ್ದಾರೆ.
ಸಂತ್ರಸ್ತ ಮಹಿಳೆಗೆ ಅತ್ಯಾಚಾರ ಎಸೆಗಿ ಮದುವೆಯಾಗಿದ್ದು, ಮದುವೆ ನಂತರ ಲೈಂಗಿಂಕ ದೌರ್ಜನ್ಯ, ಬಲವಂತವಾಗಿ ಗರ್ಭಪಾತ ಮಾಡಿಸಲಾಗಿದೆ. ಅಲ್ಲದೆ ತನ್ನ ತಂಗಿಯ ಮೇಲೆ ದೈಹಿಕ ಹಲ್ಲೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಂತ್ರಸ್ತೆ ಮಹಿಳೆ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ವರದಕ್ಷಣೆ ಕಿರುಕುಳ ನೀಡಿದಲ್ಲದೆ ಮತ್ತೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ಸ್ಯಾಂಟ್ರೋ ರವಿಯ ವಿಕೃತಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.ಸ್ಯಾಂಟ್ರೋ ರವಿ ಉದ್ದೇಶ ಪೂರ್ವಕವಾಗಿ ಮಾರಣಾಂತಿಕ ಖಾಯಿಲೆ ಅಂಟಿಸಿದ್ದಾನೆ ಎಂದು ೧೬೪ ಹೇಳಿಕೆಯಲ್ಲಿ ದಾಖಲಿಸಿದ್ದಾರೆ. ಸಂತ್ರಸ್ತೆ ಹೇಳಿಕೆಯಿಂದ ನೀರಿಕ್ಷಿಣಾ ಜಾಮೀನು ಮತ್ತಷ್ಟು ಕಠಿಣವಾಗುವ ಸಾಧ್ಯತೆ ಇದೆ.
ವರ್ಗಾವಣೆ ದಂಧೆ:
ಸ್ಯಾಂಟ್ರೋ ರವಿ ಇನ್ನು ಮತ್ತೊಂದು ಅಚ್ಚರಿಯ ವಿಚಾರವೆಂದರೆ ಸ್ಯಾಂಟ್ರೋ ರವಿ ಬಳಿ ಸಚಿವರ ಲೆಟರ್ ಎಡ್‌ಗಳು ಪತ್ತೆಯಾಗಿವೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಸ್ಯಾಂಟ್ರೋ ರವಿ ಮಾಸ್ಟರ್ ಆಗಿದ್ದ. ಪೊಲೀಸ್ ಇನ್ಸ್ಪೆಕ್ಟರ್, ಎಸಿಪಿ, ಡಿವೈಎಸ್‌ಪಿಗಳನ್ನು ಪ್ರಮೋಷನ್ ಮಾಡಿಸುತ್ತಿದ್ದ. ಪ್ರಮೋಷನ್ ಮಾಡಿಸಿ ತನಗೆ ಬೇಕಾದ ಸ್ಟೇಷನ್‌ಗೆ ಹಾಕಿಕೊಳ್ಳುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಹಾಗೂ ಸ್ಯಾಂಟ್ರೋ ರವಿ ಜೊತೆ ಟ್ರಾನ್ಸ್‌ಫರ್ ದಂಧೆಯಲ್ಲಿ ಸಚಿವರು, ಶಾಸಕರು ಭಾಗಿ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ವಿಡಿಯೋ ಸಮರ:
ರಾಜ್ಯ ರಾಜಕೀಯದಲ್ಲಿ ಸ್ಯಾಂಟ್ರೋ ರವಿ ವಿಚಾರದಲ್ಲಿ ರಾಡಿ ಎದ್ದಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ಫೋಟೋ, ವಿಡಿಯೋ ವೀಡಿಯೋ ಜಟಾಪಟಿ ತಾರಕಕ್ಕೇರಿದೆ. ಮೈಸೂರಿನಲ್ಲಿ ಓಡಾಡಿಕೊಂಡಿದ್ದ ಈ ರೌಡಿಶೀಟರ್ ರವಿ ಬೆಂಗಳೂರಿಗೆ ಬಂದಿದ್ದೇ ಒಂದು ರೋಚಕವಾಗಿದೆ.
ಸ್ಯಾಂಟ್ರೋ ರವಿಯ ಮೂಲ ಹೆಸರು ಮಂಜುನಾಥ್. ಮಂಡ್ಯ ಮೂಲದ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಸಂಪ್ರದಾಯಬದ್ಧ ಕುಟುಂಬದಿಂದ ಬಂದವರಾಗಿದ್ದಾರೆ.
ಮೈಸೂರಗೆ ರವಿ:
ರವಿ ತಂದೆ ಅಬಕಾರಿ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್ ಆಗಿದ್ದರು.ತಂದೆಯ ಮರಣದ ನಂತರ ಮಂಜುನಾಥ್ ಅಡ್ಡದಾರಿ ಹಿಡಿದಿದ್ದ. ಹೆತ್ತ ತಾಯಿ ಹಾಗೂ ಸಹೋದರರಿಗೆ ಪ್ರತಿ ದಿನ ಕಿರುಕುಳ ನೀಡುತ್ತಾ ಪುಡಿರೌಡಿಗಳ ಜೊತೆ ಸೇರಿ ಅಸಭ್ಯ ವರ್ತನೆ ಎಸಗುತ್ತಿದ್ದ .೨೦೦೦ ಇಸವಿಯಿಂದಲೇ ಪಿಂಪ್ ದಂಧೆ ಮಾಡುತ್ತಿದ್ದ ರವಿ ಮಂಡ್ಯ ಪೊಲೀಸರು ಕೊಟ್ಟ ಏಟಿಗೆ ಮಂಡ್ಯ ಬಿಟ್ಟು ಮೈಸೂರು ಸೇರಿಕೊಂಡ.
ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಈತ ಸರಸ್ವತಿಪುರಂ ಸುತ್ತಮುತ್ತ ಪಿಂಪ್ ಕೆಲಸ ಮಾಡುತ್ತಿದ್ದ. ಸ್ಯಾಂಟ್ರೋ ಕಾರಿನಲ್ಲೇ ಹುಡುಗಿಯರನ್ನು ಕರೆತಂದು ಡೀಲ್ ಕುದುರಿಸುತ್ತಿದ್ದ. ಸ್ಯಾಂಟ್ರೋ ಕಾರಲ್ಲೇ ದಂಧೆ ಮಾಡುತ್ತಿದ್ದರಿಂದ ಸ್ಯಾಂಟ್ರೋ ರವಿ ಎಂಬ ಹೆಸರು ಬಂತು. ಬಳಿಕ ಪಿಂಪ್ ರವಿ, ಸ್ಯಾಂಟ್ರೋ ರವಿ ಎಂದೇ ಫೇಮಸ್ ಆಗಿದ್ದ. ಆ ಸ್ಯಾಂಟ್ರೋ ಕಾರಿನಿಂದಲೇ ರವಿ ಅದೃಷ್ಟ ಖುಲಾಯಿಸಿ ರಾಜಕಾರಣಿಗಳ ಸ್ನೇಹ ಬೆಳೆಸಿಕೊಂಡ.
ಕುಮಾರಕೃಪಾದಲ್ಲಿ ವಾಸ:
ಮೈಸೂರಿನ ಗಲ್ಲಿ ಗಲ್ಲಿ ಅಲೆಯುತ್ತಿದ್ದ ಸ್ಯಾಂಟ್ರೋ ರವಿ ಬೆಂಗಳೂರಿಗೆ ಬಂದ ಬಳಿಕ ರಾಜಕಾರಣಿಗಳ ಸ್ನೇಹ ಬೆಳೆಸಿದ. ತನ್ನ ಪಿಂಪ್ ವ್ಯವಹಾರಕ್ಕೆ ರಾಜಕಾರಣಿಗಳ ಶ್ರೀರಕ್ಷೆ, ಕೃಪಾಕಟಾಕ್ಷ ಪಡೆದುಕೊಂಡ. ಪಿಂಪ್ ಕೆಲಸ ಗೊತ್ತಾಗಬಾರದು ಎಂಬ ಕಾರಣಕ್ಕೆ ಸರ್ಕಾರಿ ಅತಿಥಿ ಗೃಹವನ್ನೇ ಕುಮಾರ ಕೃಪಾ ಗೆಸ್ಟ್ ಹೌಸ್ ಅನ್ನೇ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ.
ಖಾಯಂ ಆಗಿ ನೆಲೆಸಿದ್ದ:
ಗೆಸ್ಟ್ ಹೌಸ್‌ನಲ್ಲೇ ರಾಜಕಾರಣಿಗಳು ಮತ್ತು ಅಧಿಕಾರಿಗಳ ಭೇಟಿ ಮಾಡುತ್ತಿದ್ದ ರವಿ ಖಾಯಂ ಆಗಿ ಅಲ್ಲಿಯೇ ನೆಲೆಸಿದ್ದ. ಇದರಿಂದಾಗಿ ಆತನಿಗೆ ತನ್ನ ವ್ಯವಹಾರ ನಡೆಸುವುದಕ್ಕೆ ಸುಲಭ ಆಗಿತ್ತು. ಈತನ ದಂಧೆ ಬಗ್ಗೆ ಯಾರಿಗೂ ಅನುಮಾನವೇ ಬರುತ್ತಿರಲಿಲ್ಲ. ವರ್ಗಾವಣೆ ದಂಧೆಯನ್ನು ಕೂಡ ತುಂಬಾ ಚೆನ್ನಾಗಿ ನಡೆಸಬಹುದಾಗಿತ್ತು. ಅದಕ್ಕಾಗಿಯೇ ಕುಮಾರಕೃಪಾ ಗೆಸ್ಟ್ ಹೌಸ್ ಖಾಯಂ ಜಾಗವಾಗಿ ಹೋಗಿತ್ತು.
ಪತ್ನಿ ಹೇಳಿದ್ದೇನು:
ಸ್ಯಾಂಟ್ರೋ ರವಿ ಪಿಂಪ್ ಆಗಿದ್ದ ಎನ್ನುವುದಕ್ಕೆ ಪತ್ನಿಯೇ ಸಾಕ್ಷಿ ಹೇಳಿದ್ದಾರೆ. ಕೆಲಸ ಹುಡುಕುತ್ತಿದ್ದ ನಾನು ಮಂಜುನಾಥ್‌ನನ್ನು ಭೇಟಿಯಾದೆ. ಕೆಲಸ ಕೊಡಿಸಿದ ಬಳಿಕ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ಮಾಡಿದ್ದ. ಪೊಲೀಸರಿಗೆ ದೂರು ಕೊಟ್ಟರೆ ನಿನ್ನ ನಗ್ನ ಫೋಟೋಗಳನ್ನು ವೈರಲ್ ಮಾಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದ್ದ ಎಂಬುದಾಗಿ ಪತ್ನಿ ಸ್ಫೋಟಕ ಸತ್ಯ ಹೇಳಿದ್ದಾರೆ. ಅಲ್ಲದೇ ಇತರರೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದ. ದೈಹಿಕವಾಗಿ ಹಲ್ಲೆ, ಕಿರುಕುಳ ನೀಡಿ ನನ್ನ ಮೇಲೆಯೇ ಕ್ರಿಮಿನಲ್ ಕೇಸ್ ಹಾಕಿದ್ದಾನೆ ಎಂದು ಎಂದು ಆರೋಪಿಸಿದ್ದಾರೆ.