‘ಸ್ಮøತಿಗಂಧ’ ಹಾಗೂ ‘ಮಾಣಿಕಪ್ರಭುಗಳ ಕತೆ ಕೇಳೋಣ’ ಎಂಬ ಎರಡು ಪುಸ್ತಕ ಲೋಕಾರ್ಪಣೆ

ಬೀದರ:ಜು.12:ಸಿಕಿಂದ್ರಾಪೂರದ ಜಾಗೀರದಾರ ಪರಿವಾರ ದೇವಕಾರ್ಯ, ಸಮಾಜಕಾರ್ಯ, ಜ್ಞಾನಕಾರ್ಯಕ್ಕೆ ಸಮರ್ಪಣೆಗೊಂಡ ಪರಿವಾರವಾಗಿದೆ. ಅದು ಈಗ ಸಾಹಿತ್ಯ ಕಾರ್ಯಕ್ಕೂ ತೆರೆದುಕೊಂಡಿರುವುದು ಸಂತಸದಾಯಕ ವಿಷಯವಾಗಿದೆ. ಜಾಗೀರದಾರ ಪರಿವಾರದ ಮತ್ತು ಕ್ರಿಯಾಶೀಲ ವ್ಯಕ್ತಿತ್ವದ ಅಜಯ ಜಾಗೀರದಾರರವರು ಸ್ವತಃ ಲೇಖಕರಾಗಿ ಜಾಗೀರದಾರ ಪರಿವಾರದ ಬಗ್ಗೆ ಕೃತಿ ಹೊರತಂದಿದ್ದಾರೆ. ಜಾಗೀರದಾರ ಪರಿವಾರ ಮಾಣಿಕಪ್ರಭು ಸಂಸ್ಥಾನದೊಂದಿಗೆ ಘನಿಷ್ಠ ಸಂಬಂಧ ಹೊಂದಿದೆ. ಇವರ ಪ್ರಭುಸೇವೆ ಅನನ್ಯವಾಗಿದೆ ಎಂದು ಮಾಣೀಕಪ್ರಭು ಸಂಸ್ಥಾನದ ಪೀಠಾಧಿಪತಿಗಳಾದ ಡಾ.ಜ್ಞಾನರಾಜ ಮಾಣೀಕಪ್ರಭುಗಳು ಹೇಳಿದರು.

ಅವರು ದಿನಾಂಕ 09-07-2023ರಂದು ಸಾಯಂಕಾಲ ಸಿಕಿಂದ್ರಾಪೂರದ ಜಾಗೀರದಾರ ಪರಿವಾರದ ಮನೆಯಲ್ಲಿ ಹಮ್ಮಿಕೊಂಡ ಎಂ.ಜಿ.ಗಂಗನಪಳ್ಳಿ ವಿರಚಿತ 'ಸ್ಮøತಿಗಂಧ' ಹಾಗೂ 'ಮಾಣಿಕಪ್ರಭುಗಳ ಕತೆ ಕೇಳೋಣ' ಎಂಬ ಎರಡು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
  ಮುಂದುವರೆದು ಇತಿಹಾಸದಲ್ಲೂ ಸಾಹಿತ್ಯ, ಸಂಸ್ಕøತಿ ಪೋಷಿಸಿದ ಮನೆತನಗಳು, ರಾಜಮನೆತನಗಳು ಅಜರಾಮರವಾಗಿದ್ದನ್ನು ಕಾಣುತ್ತೇವೆ. ಭಕ್ತಿ, ಸೇವೆ, ತ್ಯಾಗ, ಧ್ಯಾನ, ಅಧ್ಯಯನ, ಸುವಿಚಾರ, ಸುಕರ್ಮಗಳು ಸಾಹಿತ್ಯಕ್ಕೆ ಅಗತ್ಯವಾಗಿವೆ ಎಂದ್ಹೇಳಿ, ಇಂದು ಬಿಡುಗಡೆಗೊಳ್ಳುತ್ತಿರುವ ಕೃತಿಗಳ ಲೇಖಕರಾದ ಅಜಯ ಜಾಗೀರದಾರ ಹಾಗೂ ಎಂ.ಜಿ.ಗಂಗನಪಳ್ಳಿಯವರು ಸದ್ಗುಣ, ಸತ್ಕಾರ್ಯಗಳಿಗೆ ಹೆಸರಾಗಿದ್ದಾರೆ. ಇವರ ಅವಿಶ್ರಾಂತ ದುಡಿತ, ತುಡಿತ ದೇವಮುಖಿ, ಸಮಾಜಮುಖಿ, ರಾಷ್ಟ್ರಮುಖಿಯಾಗಿವೆ. ಇವರೀರ್ವರು ಸಿಕಿಂದ್ರಾಪೂರದ ಸುಪುತ್ರರಾಗಿ ಕೀರ್ತಿಶೇಷರಾಗಿದ್ದಾರೆ. ಇವರಿಂದ ಇನ್ನಷ್ಟು ಸಾಹಿತ್ಯದ ಸಮಾಜದ ವಿಧಾಯಕ ಕಾರ್ಯಗಳು ನಡೆಯಲಿ ಎಂಬ ಆಶಾಭಾವನೆ ಹಾರೈಕೆ ನಮ್ಮದ್ದಾಗಿದೆ ಎಂದರು.
 ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯಕರವರು ಮಾತನಾಡುತ್ತಾ, ಬೀದರ ಜಿಲ್ಲೆಯಲ್ಲಿ ಸಾಹಿತ್ಯ, ಸಂಸ್ಕøತಿ ವಾತಾವರಣ ಹೇರಳವಾಗಿದೆ. ಶರಣ, ಸಂತರು ಇಲ್ಲಿ ನೆಲೆನಿಂತು ಹೋಗಿದ್ದರಿಂದ, ಆ ಪ್ರಭಾವಳಿ ಮತ್ತು ವಂಶಾವಳಿ, ಪರಂಪರೆ ಇಲ್ಲಿ ಇದೆ. ಅನೇಕ ಸಾಧು-ಸಂತರ ಕರ್ತೃ ಗದ್ದುಗೆಗಳು, ಮಂದಿರಗಳು ಇಲ್ಲಿ ಸಾಕಷ್ಟಿವೆ. ಅವುಗಳ ಚರಿತ್ರೆ ಹೊರತಂದರೆ ಇಲ್ಲಿನ ಅಗಣಿತ ಸಾಹಿತಿಗಳ  ಅಗಣಿತ ಸಾಹಿತ್ಯ ಹೊರ ಬರಲು ಸಾಧ್ಯವಿದೆ. ಅಜಯ ಜಾಗೀರದಾರರು, ಜಾಗಿರದಾರ ಮನೆತನ ಹಾಗೂ ಸಿಕಿಂದ್ರಾಪೂರ ಗ್ರಾಮದ ಇತಿಹಾಸ ಕೃತಿ ರೂಪದಲ್ಲಿ ಹೊರತಂದಂತೆ, ಬೀದರ ಜಿಲ್ಲೆಯ ಪ್ರಸಿದ್ಧ ಮನೆತನಗಳ ಹಾಗೂ ಇಲ್ಲಿನ  ಐತಿಹಾಸಿಕ ಗ್ರಾಮಗಳ ಚರಿತ್ರೆ ದಾಖಲಿಸಿದರೆ, ಬೀದರ ನೆಲ, ಕರ್ಮಭೂಮಿ, ತಪೋಭೂಮಿ, ದೇವಭೂಮಿ ಎಂಬುದು ಸಾಬೀತಾಗುವುದರಲ್ಲಿ ಸಂದೇಹವಿಲ್ಲ. ಬೀದರ ವಿಶ್ವವಿದ್ಯಾಲಯ ಸಾಹಿತ್ಯ, ಜ್ಞಾನಕಾರ್ಯಗಳಿಗೆ ಸದಾ ಸಹಯೋಗ ನೀಡುತ್ತದೆ. ಇದರ ಸದ್ಬಳಕೆ ಇಲ್ಲಿನವರು ಮಾಡಿಕೊಳ್ಳಬೇಕೆಂದರು.
 ಮುಖ್ಯ ಅತಿಥಿಗಳಾಗಿ ಆಗಮಿಸಿದ ನ್ಯಾಶನಲ್ ಲೆವೆಲ್ ಮೋಟಿವೇಟರ್ ಡಾ.ಪೃಥ್ವಿರಾಜ ಎಸ್.ಲಕ್ಕಿಯವರು ಮಾತನಾಡುತ್ತಾ, ಅಜಯ ಜಾಗೀರದಾರರು ತಮ್ಮ ಮನೆತನದ 12 ತಲೆಮಾರುಗಳ ಚರಿತ್ರೆ ಸೆರೆಹಿಡಿದು ಕೃತಿ ರಚಿಸಿದ್ದು ಸ್ತುತ್ಯಾರ್ಹ ಕಾರ್ಯವಾಗಿದೆ. ಈ ಕೃತಿ ಚಲನಚಿತ್ರವಾಗಿ ಹೊರಬಂದರೆ ಈ ಕುಟುಂಬದ ವೈಭವ, ಪ್ರಭಾವ ಇನ್ನಷ್ಟು ಹೆಚ್ಚಾಗುತ್ತದೆ. ಜಾಗೀರದಾರ ಪರಿವಾರ ಈಗ ಹೈದರಾಬಾದ ವಾಸಿಯಾಗಿದ್ದರೂ, ತಮ್ಮ ಸಿಕಿಂದ್ರಾಪೂರ ಊರಿನ ಏಳಿಗೆ ಬಗ್ಗೆ ಅವರು ಹೊಂದಿದ ಕಾಳಜಿ ಚೇತೋಹಾರಿಯಾಗಿದೆ ಎಂದರು.
 ಪ್ರಾಸ್ತಾವಿಕವಾಗಿ ಅಜಯ ಜಾಗೀರದಾರರವರು ಮಾತನಾಡುತ್ತಾ ನಮ್ಮ ಪರಿವಾರದ ಪೂರ್ವಜರು ಹಾಕಿಕೊಂಡು ಬಂದ ಭಕ್ತಿ, ಭಾವ, ಸೇವೆಯ, ಪರಂಪರೆ ನಾವು ಮುಂದುವರೆಸಿಕೊಂಡು ಬರುತ್ತಿರುವುದಕ್ಕೆ ಗುರುದೇವರ ಕೃಪೆ ಕಾರಣವಾಗಿದೆ. ಎಂ.ಜಿ.ಗಂಗನಪಳ್ಳಿಯವರ ಸಾಹಿತ್ಯ ಸೇವೆ ಅವಿಶ್ರಾಂತವಾಗಿದೆ. ಅವರ ಜೀವನ ಸಾಹಿತ್ಯಕ್ಕೆ ಮೀಸಲಾದುದಾಗಿದೆ. 50ಕ್ಕೂ ಹೆಚ್ಚು ಕೃತಿ ಹೊರತಂದಿದ್ದಾರೆ. ಅವರಿಂದ ಇನ್ನಷ್ಟು ಸಾಹಿತ್ಯ ಸೇವೆ ನಡೆಯುವಂತಾಗಲಿ. ಬೇಕಿದ್ದರೆ ದೇವರು ನನ್ನ ಆಯುಷ್ಯ ಕಡಿಮೆ ಮಾಡಿ ಅವರಿಗೆ ನೀಡಲಿ. ಏಕೆಂದರೆ ಸಾಹಿತಿಗಳ ಆಯುಷ್ಯ ಹೆಚ್ಚಾದರೆ, ಅವರಿಂದ ಇನ್ನಷ್ಟು ಸಾಹಿತ್ಯ ಹೊರಬರಲು ಸಾಧ್ಯವಾಗುತ್ತದೆ ಎಂದರು.
 ಕೃತಿಕಾರರಾದ ಎಂ.ಜಿ.ಗಂಗನಪಳ್ಳಿಯವರು ಮಾತನಾಡುತ್ತಾ ನಮ್ಮ ಮನೆತನದ ಪೂರ್ವಜರು ಮಾಣೀಕಪ್ರಭುಗಳ ಸೇವೆಗೈದಿದ್ದರಿಂದ ನಮ್ಮ ಮನೆತನದಲ್ಲಿ ಸಾಹಿತ್ಯ ಸಾಧಕರು, ಸೇವಕರು  ಹೊರಬರಲು ಕಾರಣವಾಗಿದೆ. ಸಾಹಿತಿಗಳಿಗೆ ಅಧ್ಯಾತ್ಮ ಅತ್ಯವಶ್ಯಕವಾಗಿದೆ ಎಂದರು.
 ಕಾರ್ಯಕ್ರಮದಲ್ಲಿ ಡಾ.ರಾಮಚಂದ್ರ ಗಣಾಪೂರ, ರಾಮರಾವ ಗಂಗನಪಳ್ಳಿ, ಪ್ರಕಾಶ ಕುಲಕರ್ಣಿ, ಅಭಯ ಜಾಗೀರದಾರ, ರಮೇಶ ಜಾಗೀರದಾರ, ಬಾಬುರಾವ ಕುಲಕರ್ಣಿ, ಸಂಜೀವಕುಮಾರ ಅತಿವಾಳೆ ಮತ್ತಿತರರು ಹಾಜರಿದ್ದರು.