ದಾವಣಗೆರೆ; ಜೂ.೧೮: ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ನೈಜತೆ ಮತ್ತು ಗುಣಮಟ್ಟ ಪರಿಶೀಲನೆಯನ್ನು ಪಾಲಿಕೆ ಮೇಯರ್ ಮತ್ತು ಸದಸ್ಯರು ನಡೆಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸೂಚನೆ ನೀಡಿದರು.ಅವರು ಜಿಲ್ಲಾ ಆಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಮತ್ತು ಜಲಸಿರಿ ಯೋಜನೆ ಅಧಿಕಾರಿಗಳು ಹಾಗೂ ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ಮಾರ್ಟ್ ಸಿಟಿ ಯೋಜನೆಯಡಿ ನಗರವನ್ನು ಅಚ್ಚುಕಟ್ಟಾಗಿ ಮತ್ತು ಸುಂದರವಾಗಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೊಳಿಸಿದ್ದು ಅಧಿಕಾರಿಗಳು ಮನಸು ಇಚ್ಚೆ ಕಾಮಗಾರಿಗಳನ್ನು ತೆಗೆದುಕೊಂಡು ಅನ್ಯತಾ ಉದ್ದೇಶಗಳಿಗೆ ಯೋಜನೆ ಬಳಸಿದ್ದು ಕೆಲವು ಕಡೆ ತೀರಾ ಸಣ್ಣ ಸಣ್ಣ ಕಾಮಗಾರಿಗಳನ್ನು ತೆಗೆದುಕೊಂಡಿರುವುದು ಕಂಡು ಬಂದಿದೆ. ಈ ಕಾಮಗಾರಿಗಳನ್ನು ನೈಜವಾಗಿ ಕೈಗೊಂಡಿರುವ ಬಗ್ಗೆ ಮತ್ತು ಗುಣಮಟ್ಟ ಕಾಪಾಡಿರುವ ಬಗ್ಗೆ ಪಾಲಕೆ ಸದಸ್ಯರು ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.ಸ್ಮಾರ್ಟ್ ಸಿಟಿ ಯೋಜನೆ ಲೆಕ್ಕ ಪರಿಶೀಲನೆಗೆ ಸೂಚನೆ; ಸ್ಮಾರ್ಟ್ ಸಿಟಿ ಯೋಜನೆಯಡಿ ಮೂಲಭೂತ ಸೌಕರ್ಯ, ಆರೋಗ್ಯ, ಸಾರಿಗೆ, ರಸ್ತೆ, ಮಾಹಿತಿ ತಂತ್ರಜ್ಞಾನ ವಲಯ ಸೇರಿದಂತೆ 14 ವಿವಿಧ ವಲಯಗಳಲ್ಲಿ ಒಟ್ಟು 114 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದುವರೆಗೆ 882 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇದುವರೆಗೆ ಎಷ್ಟು ಬಿಲ್ಲುಗಳನ್ನು ಪಾವತಿಸಲಾಗಿದೆ ಮತ್ತು ಉಳಿಕೆ ಎಷ್ಟಿದೆ ಎಂಬ ಸಂಪೂರ್ಣ ವಿವರವನ್ನು ನೀಡಲು ಸೂಚನೆ ನೀಡಿದರು.ಬಸ್ ನಿಲ್ಲಂದತೆ ಬಸ್‍ಸ್ಟ್ಯಾಂಡ್ ನಿರ್ಮಾಣ; ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಖಾಸಗಿ ಬಸ್ ನಿಲ್ದಾಣವನ್ನು 23 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಅಲ್ಲಿ ಬಸ್ ನಿಲ್ಲಿಸಲು ಸಾಧ್ಯವಾಗದ ರೀತಿಯಲ್ಲಿ ಬಸ್ ಸ್ಟ್ಯಾಂಡ್ ನಿರ್ಮಿಸಲಾಗಿದೆ. ಮತ್ತು ಅಗತ್ಯವಿಲ್ಲದ ಕಡೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ. ಚರಂಡಿ ನಿರ್ಮಾಣವನ್ನು ಪಾಲಿಕೆಯಿಂದ ಮಾಡಲಾಗುತ್ತಿದೆ, ಆದರೆ ಈ ಯೋಜನೆಯಡಿ ಕನಿಷ್ಠ 1 ಲಕ್ಷದ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ. ಮತ್ತು ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಪೈಪ್‍ಗಳು 2.02 ಎಂಎಂ ಇದ್ದು ಯೋಜನೆಯಲ್ಲಿ 3.4 ಎಂಎಂ ಎಂದು ತೋರಿಸಲಾಗಿದೆ. ಒಳಚರಂಡಿ ಮುಚ್ಚಲು ಮ್ಯಾನ್‍ವೋಲ್ ಗೆ ಅಳವಡಿಸಿರುವ ಮುಚ್ಚಳ 40 ಟನ್ ಸಾಮಥ್ರ್ಯವನ್ನು ಹೊಂದಿರಬೇಕು, ಆದರೆ ಅದಕ್ಕಿಂತ ಕಡಿಮೆ ಗುಣಮಟ್ಟದಲ್ಲಿ ಅಳವಡಿಸಿರುವುದರಿಂದ ಮಳೆಗಾಲದಲ್ಲಿ ಇದರಿಂದ ತೊಂದರೆಯಾಗಲಿದೆ ಎಂದರು.ಹೈಸ್ಕೂಲ್ ಮೈದಾನ ತೆರವಿಗೆ ಸೂಚನೆ; ಹೈಸ್ಕೂಲ್ ಮೈದಾನ ಈ ನಗರದಲ್ಲಿನ ಅತೀ ದೊಡ್ಡ ಮೈದಾನವಾಗಿದ್ದು ಇಲ್ಲಿ ಖಾಸಗಿ ಬಸ್ ನಿಲ್ದಾಣ ಮತ್ತು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದರಿಂದ ಕ್ರೀಡಾ ಚಟುವಟಿಕೆಗಳಿಗೆ ಬಹಳ ತೊಂದರೆಯಾಗಿದೆ. ಆದಷ್ಟು ಬೇಗ ಇಲ್ಲಿಂದ ಸ್ಥಳಾಂತರಿಸಿ ಹೈಸ್ಕೂಲ್ ಮೈದಾನವನ್ನು ಸಮಿತಿಗೆ ಬಿಟ್ಟುಕೊಡಲು ಸೂಚನೆ ನೀಡಿದರು.