ಸ್ಮಾರ್ಟ್ ಸಿಟಿ ಕಾಮಗಾರಿ ತ್ವರಿತಕ್ಕೆ ಸೂಚನೆ

ಬೆಂಗಳೂರು, ನ.೨೦-ನಗರ ವ್ಯಾಪ್ತಿಯಲ್ಲಿನ ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ನಗರದಲ್ಲಿಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ವತಿಯಿಂದ ಕೈಗೆತ್ತಿಕೊಂಡಿರುವ ವಿವಿಧ ಕಾಮಗಾರಿಗಳ ತಪಾಸಣೆ ನಡೆಸಿದರು.
ಆರಂಭದಲ್ಲಿ ರೇಸ್ ಕೋರ್ಸ್ ರಸ್ತೆ ಮಾರ್ಗದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಟೆಂಡರ್ ಶ್ಯೂರ್ ಮಾದರಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ತಪಾಸಣೆ ನಡೆಸಿದ ಅವರು, ನಗರದ ಕೇಂದ್ರ ಭಾಗದ ಪ್ರಮುಖ ರಸ್ತೆಗಳಾಗಿವುದರಿಂದ ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಹೇಳಿದರು.
ಸ್ಮಾರ್ಟ್ ಸಿಟಿ ವತಿಯಿಂದ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಹೆಚ್ಚುವರಿ ಸಿಬ್ಬಂದಿ ಹಾಗೂ ಅವಶ್ಯಕ ಯಂತ್ರೋಪಕರಣಗಳನ್ನು ತ್ವರಿತವಾಗಿ ಕಾಮಗಾರಿಯನ್ನು ಮುಗಿಸಬೇಕು ಎಂದು ಸೂಚನೆ ನೀಡಿದರು.
ಅದೇ ರೀತಿ, ಜವಾಹರಲಾಲ್ ನೆಹರು ತಾರಾಲಯ ಮತ್ತು ರಾಜಭವನ ರಸ್ತೆ ಪಾದಚಾರಿ ಮಾರ್ಗದಲ್ಲಿರುವ ಗಿಡ, ಮರಗಳ ಸುತ್ತಲು ನೀರು ನಿಲ್ಲಲು ವ್ಯವಸ್ಥೆ ಮಾಡಬೇಕು. ಬೀದಿ ದೀಪಗಳನ್ನು ಕೂಡಲೆ ಅಳವಡಿಸಬೇಕು. ಪಾದಚಾರಿ ಮಾರ್ಗದಲ್ಲಿರುವ ಡೆಬ್ರಿಸ್, ಮಣ್ಣು ರಾಶಿಯನ್ನು ಕೂಡಲೆ ತೆಗೆಯಿರಿ. ರಾಜಭವನ ಪಕ್ಕ ಪಾದಚಾರಿ ಮಾರ್ಗದಲ್ಲಿ ಮಣ್ಣು ರಾಶಿ ತೆಗೆದು ಹದಿನೈದು ದಿನಗಳಲ್ಲಿ ಕೆಲಸ ಮುಗಿಸಬೇಕು ಎಂದರು.
ಅದೇ ರೀತಿ, ಮೆಗ್ರಾತ್ ರಸ್ತೆ, ಇನ್ ಫೆಂಟ್ರಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಡಿಕನ್ಸನ್ ರಸ್ತೆ, ಹಲಸೂರು, ಮಿಲ್ಲರ್ಸ್, ಕ್ವೀನ್ಸ್ ರಸ್ತೆ, ಲ್ಯಾವೆಲ್ಲೆ ರಸ್ತೆ ತಪಾಸಣೆ ನಡೆಸಿ ಕೂಡಲೆ ಪೈಪ್ ಲೈನ್ ಹಾಗೂ ಡಕ್ಟ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಿ ಆದಷ್ಟು ಬೇಗ ಸಂಪೂರ್ಣ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ (ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.