ಸ್ಮಾರ್ಟ್ ಸಿಟಿಗೆ ದಾವಣಗೆರೆ ಆಯ್ಕೆಯಾಗಲು ಸಂಸದರ ಪ್ರಯತ್ನ ಕಾರಣ

ದಾವಣಗೆರೆ.ಮಾ.೧೧: ಸ್ಮಾರ್ಟ್ ಸಿಟಿ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ.ದಾವಣಗೆರೆಯು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಲು ಸಂಸದ ಜಿ. ಎಂ. ಸಿದ್ದೇಶ್ವರರ ಪ್ರಯತ್ನವೇ ಕಾರಣವೇ ಹೊರತು ಕಾಂಗ್ರೆಸ್ ಪಕ್ಷ ಅಲ್ಲ ಎಂದು  ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಅವರು ಶಾಮನೂರು ಶಿವಶಂಕರಪ್ಪರಿಗೆ ತಿರುಗೇಟು ನೀಡಿದ್ದಾರೆ.ಭಾರತ ಸರ್ಕಾರದ ನಗರಾಭಿವೃದ್ಧಿ ಸಚಿವರಾಗಿದ್ದಾಗ ವೆಂಕಯ್ಯನಾಯ್ಡು ಅವರಿಗೆ ಲೋಕಸಭಾ ಸದಸ್ಯರು ಜಿ.ಎಂ ಸಿದ್ದೇಶ್ವರ ಅವರು ಒತ್ತಡ ಹಾಕಿದರಿಂದ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಬಂದಿದೆ ಎಂದಿದ್ದಾರೆ‌.ಆದರೆ ನಿನ್ನೆ ಶಾಸಕ ಶಾಮನೂರು ಶಿವಶಂಕರಪ್ಪನವರು ಬಸಾಪುರದ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ,  ದಾವಣಗೆರೆ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಕಾಂಗ್ರೆಸ್ ಪಕ್ಷದ ಪ್ರಯತ್ನದಿಂದ ಮೊದಲನೇ ಹಂತದಲ್ಲೇ ಆಯ್ಕೆ ಆಯ್ತು ಎಂದು ಹೇಳಿರುವುದರಲ್ಲಿ ಸತ್ಯಾಂಶ ಇಲ್ಲ.  ನೀವು ಅಷ್ಟೊಂದು ದಾವಣಗೆರೆಯನ್ನು ಅಭಿವೃದ್ಧಿಪಡಿಸಿದ್ದರೆ ನಿಮ್ಮನ್ನೇಕೆ ಮಂತ್ರಿ ಪದವಿಯಿಂದ ಕೇವಲ ಎರಡೇ ವರ್ಷದಲ್ಲಿ ತೆಗೆದು ಹಾಕಿದರು? ಎಂದು ಪ್ರಶ್ನಿಸಿದ್ದಾರೆ.ಶಾಮನೂರ ಶಿವಶಂಕರಪ್ಪ ಅವರು ನೀವು ವಯಸ್ಸಿನಲ್ಲಿ ತುಂಬಾ ಹಿರಿಯರು.‌ ರಾಜಕಾರಣದಲ್ಲಿ ನುರಿತವರು. ಈಗಲಾದರೂ ಸತ್ಯ ಹೇಳುವುದನ್ನು ಕಲಿಯಿರಿ. ಏಕೆಂದರೆ ಇತ್ತೀಚೆಗೆ ನಡೆದ ನಿಮ್ಮ ಮಗನ ಫಾರಂ ಹೌಸ್ ನಲ್ಲಿ ಅಕ್ರಮವಾಗಿ ಜಿಂಕೆ, ಕೃಷ್ಣಮೃಗ, ಹಂದಿ ಮತ್ತು ನರಿ ಸಾಕಿದ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು ರೈಡ್ ಮಾಡಿ ಆ ಪ್ರಾಣಿಗಳನ್ನೆಲ್ಲ  ಆನಗೋಡು  ಮೃಗಾಲಯಕ್ಕೆ ಸ್ಥಳಾಂತರ ಮಾಡಿದರು‌. ನಿಮ್ಮ ಮಗನ ಮೇಲೆ ಕೇಸು ದಾಖಲೆ ಮಾಡಿದ ಮೇಲೆ ನಿಮ್ಮ ಪ್ರಶ್ನೆ ಮಾಡಿದಾಗ ನಾವು ಅಲ್ಲಿ ಯಾವ ಕಾಡುಪ್ರಾಣಿಗಳನ್ನು ಸಾಕಿರಲಿಲ್ಲ. ಆಕಳು ಕುರಿ ಸಾಕಿದ್ದೇವೆ ಎಂದು ಸುಳ್ಳು ಹೇಳಿದ್ದೀರಿ. ಮೊನ್ನೆ ಮಾಡಳ್ ವಿರೂಪಾಕ್ಷಪ್ಪ ಪುತ್ರನ ಕಚೇರಿ ಹಾಗೂ ಮನೆ ಮೇಲೆ ದಾಳಿ ಆದಾಗ ಜಿಎಂ ಸಿದ್ದೇಶ್ವರ್ ರೈಡ್ ಮಾಡ್ಸಿದ್ದು ಎಂದು ಸುಳ್ಳು ಹೇಳಿದ್ರಿ. ಈಗ ಸ್ಮಾರ್ಟ್ ಸಿಟಿ ಯೋಜನೆ ಕಾಂಗ್ರೆಸ್ ಪ್ರಯತ್ನದಿಂದ ಬಂದಿದ್ದು ಎಂದು ಸುಳ್ಳು ಹೇಳುತ್ತಿದ್ದೀರಾ. ಇದನ್ನು ನಿಲ್ಲಿಸಬೇಕು ಎಂದಿದ್ದಾರೆ.ರಾಜಕಾರಣದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷದ ಆಯ್ಕೆಯಾದ ಪ್ರಧಾನಿಗಳಲ್ಲಿ ಯಾರಿಗಾದರೂ  ಸ್ಮಾರ್ಟ್ ಸಿಟಿ ಯೋಜನೆಯ ಪರಿಕಲ್ಪನೆ ಇತ್ತಾ? ದೇಶದ ನೆಚ್ಚಿನ ಪ್ರಧಾನಿ  ನರೇಂದ್ರ ಮೋದಿ ಅವರನ್ನು ಬಿಜೆಪಿ ಪಕ್ಷದಿಂದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಮೇಲೆ 2014ರ ದಾವಣಗೆರೆ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ನೀವು ಇಲ್ಲಿದ್ದ ಕಮಲವನ್ನು ಆಯ್ಕೆ ಮಾಡಿ ಕಳಿಸಿ ನಾನು ಅಲ್ಲಿಂದ  ಕಮಲದಲ್ಲಿ ಲಕ್ಷ್ಮಿಯನ್ನು ಕೂರಿಸಿ ಕಳಿಸುತ್ತೇನೆ ಎಂದು ಹೇಳಿದ್ದರು,  ಅವರು ಕೊಟ್ಟ ಮಾತಿನಂತೆ ದಾವಣಗೆರೆಯ ಲೋಕಸಭಾ ಕ್ಷೇತ್ರದ ಜನತೆ ಜಿ ಎಂ ಸಿದ್ದೇಶ್ವರ ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಿ ಕಳಿಸಿದ್ದರು. ನರೇಂದ್ರ ಮೋದಿ ಅವರು ಒಂದು ಸಾವಿರ ಕೋಟಿ ರೂಪಾಯಿ ಸ್ಮಾರ್ಟ್ ಸಿಟಿ ಯೋಜನೆಯನ್ನು ದಾವಣಗೆರೆಗೆ ನಗರಕ್ಕೆ ಕೊಟ್ಟರು ಇಂತಹ ವಿಷಯ ಇಡೀ ದಾವಣಗೆರೆ ಜಿಲ್ಲೆಗೆ ಗೊತ್ತಿರುವ ವಿಚಾರ ಎಂದು ತಿರುಗೇಟು ನೀಡಿದ್ದಾರೆ.