ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೆ ಮಹಿಳೆಯರು ಗುರುತಿನ ಚೀಟಿಯದಾಖಲೆ ತೋರಿಸಿ ಶೂನ್ಯ ಮೊತ್ತದ ಟಿಕೇಟ್ ಪಡೆದು ಪ್ರಯಾಣಿಸಲು ಸೂಚನೆ

ಕಲಬುರಗಿ,ಜೂ.21:‘’ಶಕ್ತಿ ಯೋಜನೆ’’ಯಡಿ ರಾಜ್ಯದ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಸಂಸ್ಥೆಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರ್ಕಾರವು ಅನುಮತಿ ನೀಡಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಸೇವಾ ಸಿಂಧು ಮೂಲಕ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೆ ಎಲ್ಲಾ ಮಹಿಳಾ ಪ್ರಯಾಣಿಕರು ಪ್ರಯಾಣದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ಕೆಳಕಂಡ ಯಾವುದಾದರೂ ಗುರುತಿನ ಚೀಟಿಗಳಲ್ಲಿ ಒಂದರ ಮೂಲ ಪ್ರತಿ, ಡಿಜಿಲಾಕರ್ (ಆigiಟoಛಿಞeಡಿ) ಮುಖಾಂತರ ಬಸ್ ನಿರ್ವಾಹಕರಿಗೆ ತೋರಿಸಿ ಕಡ್ಡಾಯವಾಗಿ ಶೂನ್ಯ ಮೊತ್ತದ ಉಚಿತ ಟಿಕೇಟ್ ಪಡೆದು ಪ್ರಯಾಣಿಸಬಹುದಾಗಿದೆ. ಆದಾಗ್ಯೂ ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ಗುರುತಿನ ಚೀಟಿಗಳ ಮೂಲ, ನಕಲು, ಡಿಜಿಲಾಕರ್ (ಹಾರ್ಡ್ ಮತ್ತು ಸಾಫ್ಟ್ ಕಾಪಿ) ಮಾದರಿಯಲ್ಲಿ ಹಾಜರುಪಡಿಸಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.

   ಗುರುತಿನ ಚೀಟಿಗಳ ವಿವರ ಇಂತಿದೆ. ಆಧಾರ ಕಾರ್ಡ್, ಚುನಾವಣಾ ಆಯೋಗ ವಿತರಿಸಿರುವ ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಪತ್ರ, ವಾಸಸ್ಥಳ ನಮೂದಿಸಿರುವ ಭಾರತ ಸರ್ಕಾರದ ಇಲಾಖೆಗಳು/ಭಾರತ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ/ಸಂಸ್ಥೆಗಳು (ಪಿ.ಎಸ್.ಯು.ಎಸ್.)ವಿತರಿಸಿರುವ ಗುರುತಿನ ಚೀಟಿ, ವಾಸಸ್ಥಳ ನಮೂದಿಸಿರುವಂತಹ ಕರ್ನಾಟಕ ಸರ್ಕಾರದ ಇಲಾಖೆಗಳು/ಕರ್ನಾಟಕ ಸರ್ಕಾರದ ಸಾರ್ವಜನಿಕ ವಲಯಗಳು ಉದ್ದಿಮೆ/ಸಂಸ್ಥೆಗಳು ವಿತರಿಸಿರುವ ಗುರುತಿನ ಚೀಟಿ ಹಾಗೂ ಕರ್ನಾಟಕ ಸರ್ಕಾರದ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಗುರುತಿನ ಚೀಟಿ.